Breaking
30 Sep 2026, Wed

MRPL ತೈಲ ಸ್ಥಾವರದಲ್ಲಿ ಭೀಕರ ಸ್ಫೋಟ; 8 ಮಂದಿಗೆ ಗಾಯ, ಮಂಗಳೂರು ಸುತ್ತಮುತ್ತ ಕಂಪನ

ಮಂಗಳೂರು: ನಗರದ ಹೊರವಲಯದ ಜೋಕಟ್ಟೆಯಲ್ಲಿರುವ ಮಂಗಳೂರು ರಿಫೈನರಿ ಅಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ತೈಲ ಸ್ಥಾವರದ ಹೈಡ್ರೋ ಸಲ್ಫರ್ ಟ್ರೀಟ್ಮೆಂಟ್ ಘಟಕದಲ್ಲಿ ಬುಧವಾರ ಭೀಕರ ಸ್ಫೋಟ ಸಂಭವಿಸಿದೆ. ಸ್ಫೋಟದ ಬೆನ್ನಲ್ಲೇ ಬೆಂಕಿ ಹಾಗೂ ದಟ್ಟ ಹೊಗೆ ಕಾಣಿಸಿಕೊಂಡಿದ್ದು, ಘಟನೆಯಲ್ಲಿ ಎಂಟು ಮಂದಿ ಗಾಯಗೊಂಡಿದ್ದಾರೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ತಿಳಿಸಿದ್ದಾರೆ.


ಸ್ಫೋಟ ಸಂಭವಿಸಿದ ಘಟಕದಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಸದ್ಯ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ. ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.
ಘಟನೆಯಲ್ಲಿ ರಾಜೇಶ್ ಬ್ಯಾಪ್ಟಿಸ್ಟ್ (42) ಅವರಿಗೆ ಶೇ.35ರಷ್ಟು ಸುಟ್ಟ ಗಾಯಗಳಾಗಿದ್ದು, ಅವರನ್ನು ಮುಕ್ಕದ ಶ್ರೀನಿವಾಸ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.


ಇನ್ನು ಗಾಯಗೊಂಡ ಇಂದ್ರಜಿತ್, ಪ್ರಸಾದ್ ಹಾಗೂ ರಮಣ್ ಅವರನ್ನು ಎ.ಜೆ. ಆಸ್ಪತ್ರೆಗೆ ದಾಖಲಿಸಲಾಗಿದೆ. ಜೆರೋಮ್, ಜಯರಾಮ್, ಅವಿನಾಶ್ ಹಾಗೂ ಅಕ್ಷಯ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು MRPL ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸುರತ್ಕಲ್ ಪೊಲೀಸರು ತಿಳಿಸಿದ್ದಾರೆ.
ಪ್ರಾಥಮಿಕ ಮಾಹಿತಿಯ ಪ್ರಕಾರ ಕೂಲಿಂಗ್ ಪ್ಲಾಂಟ್ನಲ್ಲಿ ಬೆಂಕಿ ಕಾಣಿಸಿಕೊಂಡ ಬಳಿಕ ಸ್ಫೋಟ ಸಂಭವಿಸಿರುವ ಸಾಧ್ಯತೆ ಇದೆ. ಘಟನೆಯ ನಿಖರ ಕಾರಣದ ಕುರಿತು ಪರಿಶೀಲನೆ ನಡೆಯುತ್ತಿದೆ.


ಸ್ಫೋಟದ ತೀವ್ರತೆ ಜೋಕಟ್ಟೆ ಸುತ್ತಮುತ್ತ ಮಾತ್ರವಲ್ಲದೆ ಹಲವು ಕಿಲೋಮೀಟರ್ ದೂರದ ಪ್ರದೇಶಗಳಲ್ಲೂ ಅನುಭವಕ್ಕೆ ಬಂದಿದೆ. ಕಟೀಲು, ಮೂಲ್ಕಿ, ಕಿನ್ನಿಗೋಳಿ ಸೇರಿದಂತೆ ಸುಮಾರು 15ರಿಂದ 18 ಕಿ.ಮೀ. ವ್ಯಾಪ್ತಿಯ ಪ್ರದೇಶಗಳಲ್ಲಿ ಭಾರೀ ಸ್ಫೋಟದ ಸದ್ದು ಕೇಳಿಬಂದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಮಂಗಳೂರು ನಗರದ ಕದ್ರಿ ಸೇರಿದಂತೆ ಹಲವು ಪ್ರದೇಶಗಳ ನಿವಾಸಿಗಳು ಸ್ಫೋಟದ ಶಬ್ದವನ್ನು ಕೇಳಿದ್ದು, ಕೆಲವೆಡೆ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ತಿಳಿಸಿದ್ದಾರೆ. ಮೂಡುಶೆಡ್ಡೆ ಪರಿಸರದಲ್ಲಿ ಸ್ಫೋಟದ ತೀವ್ರತೆಗೆ ಕಿಟಕಿ ಹಾಗೂ ಬಾಗಿಲುಗಳು ಅಲುಗಾಡಿವೆ ಎಂದು ಸ್ಥಳೀಯರು ಹೇಳಿದ್ದಾರೆ.


ಜೋಕಟ್ಟೆ ಪರಿಸರದಲ್ಲಿ ಕೆಲವು ಮನೆಗಳಿಗೆ ಬಿರುಕು ಬಿದ್ದಿರುವ ಬಗ್ಗೆ ಸ್ಥಳೀಯರಿಂದ ಮಾಹಿತಿ ಲಭ್ಯವಾಗಿದ್ದು, ಜನರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
MRPL ಸ್ಥಾವರದಿಂದ ಸುಮಾರು ಏಳೆಂಟು ಕಿಲೋಮೀಟರ್ ದೂರದಲ್ಲಿರುವ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಯೂ ಸ್ಫೋಟದ ಕಂಪನ ಅನುಭವವಾಗಿದೆ. ಸ್ಫೋಟದ ಬಳಿಕ MRPL ಸ್ಥಾವರದ ಕಡೆಯಿಂದ ಬೆಂಕಿ ಹಾಗೂ ದಟ್ಟ ಹೊಗೆ ಕಾಣಿಸಿಕೊಂಡಿದ್ದು, ವಿಮಾನ ನಿಲ್ದಾಣದ ಸಿಬ್ಬಂದಿಯಲ್ಲಿ ಕೆಲಕಾಲ ಆತಂಕ ಉಂಟಾಯಿತು.


ಆದರೆ ವಿಮಾನ ನಿಲ್ದಾಣದ ಕಾರ್ಯಾಚರಣೆಗೆ ಯಾವುದೇ ತೊಂದರೆಯಾಗಿಲ್ಲ. ವಿಮಾನಗಳ ಸಂಚಾರ ಎಂದಿನಂತೆ ಮುಂದುವರಿದಿದ್ದು, ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಮಂಗಳೂರು ಪೊಲೀಸ್ ಕಮಿಷನರ್, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ.

Leave a Reply

Your email address will not be published. Required fields are marked *