Breaking
30 Sep 2026, Wed

ಬೈಂದೂರು: ಪ್ರೇಯಸಿ ಜೊತೆ ಸೇರಿ ಪತ್ನಿಗೆ ವಿಷದ ಇಂಜೆಕ್ಷನ್ ನೀಡಿ ಕೊಲೆ ಯತ್ನ ಪ್ರಕರಣದ ಆರೋಪಿಗಳ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ

ಕುಂದಾಪುರ: ಬೈಂದೂರು ತಾಲೂಕಿನ ಗೋಳಿಹೊಳೆ ಗ್ರಾಮದ ಚಾರ್ಸಾಲು ಪ್ರದೇಶದ ಸೌಪರ್ಣಿಕಾ ನದಿ ಸಮೀಪ ಪುರುಷ ಹಾಗೂ ಮಹಿಳೆಯ ಮೃತದೇಹಗಳು ಪತ್ತೆಯಾಗಿವೆ.

ಮೃತರನ್ನು ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕೊಲೆ ಯತ್ನ ಪ್ರಕರಣದ ಆರೋಪಿಗಳಾದ ಚಾರ್ಸಾಲು ಮೂಲದ ವಿಠ್ಠಲ್ ನಾಯ್ಕ್ (36) ಹಾಗೂ ಹೊಸೂರು ಮೂಲದ ಭವ್ಯಾ ಅಲಿಯಾಸ್ ನಿಶ್ಮಿತಾ (33) ಎಂದು ಗುರುತಿಸಲಾಗಿದೆ.

ಅನಾರೋಗ್ಯದಿಂದ ಬಳಲುತ್ತಿದ್ದ ವಿಠ್ಠಲ್ ನಾಯ್ಕ್ ಅವರ ಪತ್ನಿಗೆ ಭವ್ಯಾ ಜೊತೆ ಸೇರಿ ಇಂಜೆಕ್ಷನ್ ಮೂಲಕ ವಿಷ ನೀಡಿ ಕೊಲೆ ಮಾಡಲು ಯತ್ನಿಸಿದ ಆರೋಪದಡಿ ಇಬ್ಬರ ವಿರುದ್ಧ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಬಳಿಕ ಇಬ್ಬರೂ ನಾಪತ್ತೆಯಾಗಿದ್ದು, ಪೊಲೀಸರು ಪತ್ತೆ ಕಾರ್ಯಾಚರಣೆ ನಡೆಸುತ್ತಿದ್ದರು.

ಇದೀಗ ಬೈಂದೂರು ಠಾಣಾ ವ್ಯಾಪ್ತಿಯ ಗೋಳಿಹೊಳೆ ಪ್ರದೇಶದಲ್ಲಿ ಇಬ್ಬರ ಮೃತದೇಹಗಳು ಪತ್ತೆಯಾಗಿದ್ದು, ಕೆಲವು ದಿನಗಳ ಹಿಂದೆಯೇ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಬೈಂದೂರು ಸಿಪಿಐ ಶಿವಕುಮಾರ್, ಕೊಲ್ಲೂರು ಪಿಎಸ್ಐ ವಿನಯ್ ಎಂ. ಕೊರ್ಲಹಳ್ಳಿ ಹಾಗೂ ಬೈಂದೂರು ಪಿಎಸ್ಐ ಸುನೀಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸೋಕೋ ತಂಡ ಹಾಗೂ ಬೆರಳಚ್ಚು ತಜ್ಞರು ಕೂಡ ಸ್ಥಳಕ್ಕೆ ಭೇಟಿ ನೀಡಿದರು.

ಗಂಗೊಳ್ಳಿ ತುರ್ತು ಸ್ಪಂದನಾ ತಂಡದ ಇಬ್ರಾಹಿಂ ಗಂಗೊಳ್ಳಿ, ವಿಲ್ಸನ್ ರೆಬೆಲ್ಲೋ ಹಾಗೂ ವಿಕಾಸ್ ಮೊಗವೀರ ಅವರು ಮರದ ಮೇಲೆ ನೇತಾಡುತ್ತಿರುವ ಮೃತದೇಹಗಳ ಅಳಿದುಳಿದ ಅವಶೇಷಗಳನ್ನು ತೆರವುಗೊಳಿಸಿ ಹಾಗೂ ಕೆಳಗಡೆ ಬಿದ್ದಿದ್ದ ಇನ್ನಿತರ ಅವಶೇಷಗಳನ್ನು ವಿಂಗಡಿಸಿ ಬೈಂದೂರು ಸರ್ಕಾರಿ ಆಸ್ಪತ್ರೆಯ ಶೀತಲೀಕರಣ ಘಟಕಕ್ಕೆ ರವಾನಿಸಲು ಪೊಲೀಸರಿಗೆ ಸಹಕರಿಸಿದರು.

Leave a Reply

Your email address will not be published. Required fields are marked *