Breaking
30 Sep 2026, Wed

ಮಂಗಳೂರಿನಲ್ಲಿ MRPL ಆವರಣದಲ್ಲಿ ಭಾರಿ ಸ್ಫೋಟದ ಸದ್ದು; ವಿಮಾನ ನಿಲ್ದಾಣದ ಗಾಜುಗಳು ಒಡೆದಿರುವ ಮಾಹಿತಿ

ಮಂಗಳೂರು: ನಗರದ ಹೊರವಲಯದ ಜೋಕಟ್ಟೆ–ಕಳವಾರು ಸಮೀಪದ ಮಂಗಳೂರು ರಿಫೈನರಿ ಅಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ಆವರಣದಲ್ಲಿ ಬುಧವಾರ ಮಧ್ಯಾಹ್ನ ಭಾರಿ ಸ್ಫೋಟದ ಸದ್ದು ಕೇಳಿಬಂದಿದ್ದು, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.


MRPLನ ಥರ್ಡ್ ಫೇಸ್ ವ್ಯಾಪ್ತಿಯ ಸಿಎಸ್ಟಿ ಘಟಕದಲ್ಲಿ ಸ್ಫೋಟ ಸಂಭವಿಸಿದೆ ಎನ್ನಲಾಗಿದ್ದು, ಸ್ಫೋಟದ ಬೆನ್ನಲ್ಲೇ ಪ್ರದೇಶದಲ್ಲಿ ದಟ್ಟ ಹೊಗೆ ಆವರಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಜೋಕಟ್ಟೆ, ಕಳವಾರು, ಬಾಳ, ಪೊರ್ಕೋಡಿ ಹಾಗೂ ಸುರತ್ಕಲ್ ಸುತ್ತಮುತ್ತಲಿನ ಪ್ರದೇಶಗಳಿಗೂ ಹೊಗೆ ವ್ಯಾಪಿಸಿರುವ ಮಾಹಿತಿ ಲಭ್ಯವಾಗಿದೆ.
ಸ್ಫೋಟದ ತೀವ್ರತೆಗೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ಶಬ್ದ ಕೇಳಿಬಂದಿದ್ದು, ಕಟ್ಟಡಗಳು ಕಂಪಿಸಿದ ಅನುಭವವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಸ್ಫೋಟದ ಪರಿಣಾಮ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕೆಲವು ಕಿಟಕಿ ಗಾಜುಗಳು ಒಡೆದಿರುವುದಾಗಿ ಸ್ಥಳೀಯರಿಂದ ಮಾಹಿತಿ ಲಭ್ಯವಾಗಿದೆ.
ಘಟನೆಯ ಹಿನ್ನೆಲೆಯಲ್ಲಿ ಅಗ್ನಿಶಾಮಕ ದಳ ಹಾಗೂ ಸಂಬಂಧಿತ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆ ಹಾಗೂ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಘಟನೆಯಲ್ಲಿ ಕೆಲವು ಕಾರ್ಮಿಕರು ಗಾಯಗೊಂಡಿರುವ ಶಂಕೆಯೂ ವ್ಯಕ್ತವಾಗಿದೆ.


ಆದರೆ ಸ್ಫೋಟಕ್ಕೆ ನಿಖರ ಕಾರಣವೇನು, ಘಟನೆಯಿಂದ ಉಂಟಾಗಿರುವ ಹಾನಿಯ ಪ್ರಮಾಣ ಎಷ್ಟು ಹಾಗೂ ಯಾವುದೇ ಸಾವು–ನೋವು ಸಂಭವಿಸಿದೆಯೇ ಎಂಬ ಕುರಿತು MRPL ಆಡಳಿತ ಮಂಡಳಿ ಅಥವಾ ಪೊಲೀಸ್ ಇಲಾಖೆ ಅಧಿಕೃತ ಮಾಹಿತಿ ನೀಡಬೇಕಿದೆ.

Leave a Reply

Your email address will not be published. Required fields are marked *