ಮಾಣಿ: ಪರಿಶುದ್ಧ ಮನಸ್ಸು ಮತ್ತು ನಿರ್ಮಲ ಹೃದಯದಿಂದಲೇ ದೇವರನ್ನು ಕಾಣಲು ಸಾಧ್ಯ. ನಾರಾಯಣ ಗುರುಗಳ ತತ್ತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಸಚಿನ್ ಅಮೀನ್ ಪೆರಾಜೆ ಹೇಳಿದರು.


ಯುವವಾಹಿನಿ (ರಿ.) ಮಾಣಿ ಘಟಕದ ವತಿಯಿಂದ ನಡೆಯುತ್ತಿರುವ ‘ಮನೆಮನೆಗೆ ಗುರುತತ್ತ್ವ ಸಂದೇಶ’ ಕಾರ್ಯಕ್ರಮದ ಅಂಗವಾಗಿ ಸೆ. 28ರಂದು ಕೆದಿಲದ ರವಿ ಭಂಡಾರಿ ಅವರ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
“ನಾರಾಯಣ ಗುರುಗಳು ಸಾರಿದ ತತ್ತ್ವಗಳು ಪ್ರತಿಯೊಬ್ಬರ ಬದುಕಿಗೂ ದಾರಿದೀಪವಾಗಿವೆ. ಪರಿಶುದ್ಧ ಮನಸ್ಸು ಹಾಗೂ ನಿರ್ಮಲ ಹೃದಯದ ಮೂಲಕವೇ ದೈವತ್ವವನ್ನು ಅನುಭವಿಸಲು ಸಾಧ್ಯ. ಗುರುಗಳ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು” ಎಂದು ಸಚಿನ್ ಅಮೀನ್ ಪೆರಾಜೆ ಹೇಳಿದರು.

ಗ್ರಾಮದ ದೈವದ ಚಾಕ್ರಿಯಾಗಿ ಸೇವೆ ಸಲ್ಲಿಸುತ್ತಿರುವ ರವಿ ಭಂಡಾರಿ ಮಾತನಾಡಿ, ನಾರಾಯಣ ಗುರುಗಳ ತತ್ತ್ವಸಂದೇಶಗಳು ತಮಗೆ ಅತ್ಯಂತ ಪ್ರಿಯವಾಗಿದ್ದು, ತಮ್ಮ ಮನೆಯಲ್ಲಿ ಭಜನೆ ಹಾಗೂ ತತ್ತ್ವಸಂದೇಶ ಕಾರ್ಯಕ್ರಮ ನಡೆಸಬೇಕೆಂಬ ಬಹುದಿನಗಳ ಆಶಯ ಹೊಂದಿದ್ದೆ. ಇದೀಗ ಈ ಆಶಯದಂತೆ ಕಾರ್ಯಕ್ರಮ ನಡೆದಿರುವುದು ಸಂತಸ ತಂದಿದೆ. ಕಾರ್ಯಕ್ರಮ ಆಯೋಜಿಸಿದ ಯುವವಾಹಿನಿ ಘಟಕಕ್ಕೆ ಹೃತ್ಪೂರ್ವಕ ವಂದನೆ ಸಲ್ಲಿಸುವುದಾಗಿ ಹೇಳಿದರು.

ಯುವವಾಹಿನಿ (ರಿ.) ಮಾಣಿ ಘಟಕದ ಅಧ್ಯಕ್ಷ ಗಣೇಶ್ ಪೂಜಾರಿ ಕೊಡಾಜೆ ಸ್ವಾಗತಿಸಿದರು. ಕಾರ್ಯದರ್ಶಿ ವಿಶ್ವನಾಥ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಶ್ರೀಧರ್ ಪೂಜಾರಿ ಮುಜಲ ವಂದಿಸಿದರು.
ಮಾಜಿ ಅಧ್ಯಕ್ಷರಾದ ಹರೀಶ್ ಪೂಜಾರಿ, ರಮೇಶ್ ಪೂಜಾರಿ, ನಿರ್ದೇಶಕರಾದ ಸುರೇಶ್ ಪೂಜಾರಿ, ಸತೀಶ್ ಮುರುವ, ರಾಜೇಶ್ ಕೋಟ್ಯಾನ್, ಜನಾರ್ದನ, ಯಶೋದಾ, ಬಾಲಕೃಷ್ಣ ಶೇರಾ, ದಿನೇಶ್, ಸುಜಿತ್ ಸೇರಿದಂತೆ ಯುವವಾಹಿನಿ ಸದಸ್ಯರು ಹಾಗೂ ಮನೆಯ ಆಸುಪಾಸಿನವರು ಉಪಸ್ಥಿತರಿದ್ದರು.




