ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿವಿಧ ಕಾರ್ಯಕ್ರಮಗಳ ಮೂಲಕ ಸದಸ್ಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಿದೆ ಎಂದು ಬಂಟ್ವಾಳ ಕ್ಷೇತ್ರದ ಶಾಸಕ ರಾಜೇಶ್ ನಾಯ್ಕ್ ಹೇಳಿದರು.

ಸೆ.20ರಂದು ಕಲ್ಲಡ್ಕ ಪೂರ್ಲಿಪಾಡಿ ಮರಾಠಿ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್ (ರಿ.), ವಿಟ್ಲ ಇದರ ಪ್ರಗತಿಬಂಧು ಸ್ವಸಹಾಯ ಸಂಘಗಳ ಕಲ್ಲಡ್ಕ ವಲಯದ 7 ಒಕ್ಕೂಟಗಳ ಪದಗ್ರಹಣ ಸಮಾರಂಭದಲ್ಲಿ ಒಕ್ಕೂಟದ ಪದಾಧಿಕಾರಿಗಳ ದಾಖಲಾತಿ ಹಾಗೂ ಜವಾಬ್ದಾರಿಯ ಹಸ್ತಾಂತರ ನೆರವೇರಿಸಿ ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಗತಿಬಂಧು ಸ್ವಸಹಾಯ ಸಂಘಗಳ ಕಲ್ಲಡ್ಕ ವಲಯದ ಅಧ್ಯಕ್ಷೆ ತುಳಸಿ ವಹಿಸಿದ್ದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾಜಿ ಶಾಸಕ ಎ. ರುಕ್ಮಯ ಪೂಜಾರಿ ಮಾತನಾಡಿ, ಅಡುಗೆ ಕೋಣೆಗೆ ಸೀಮಿತವಾಗಿದ್ದ ಗ್ರಾಮೀಣ ಭಾಗದ ಮಹಿಳೆಯರ ಬದುಕಿನಲ್ಲಿ ಕ್ರಾಂತಿಕಾರಿ ಬದಲಾವಣೆ ತರಲು ವೀರೇಂದ್ರ ಹೆಗ್ಗಡೆಯವರ ದೂರದೃಷ್ಟಿಯ ಗ್ರಾಮಾಭಿವೃದ್ಧಿ ಯೋಜನೆ ಕಾರಣವಾಗಿದೆ ಎಂದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಬಾಬು ನಾಯ್ಕ್ ಮಾತನಾಡಿ, ಯೋಜನೆ ಬೆಳೆದು ಬಂದ ಹಾದಿ ಹಾಗೂ ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನೂ ಮುಖ್ಯವಾಹಿನಿಗೆ ತರುವಲ್ಲಿ ಯೋಜನೆಯ ವಿವಿಧ ಕಾರ್ಯಕ್ರಮಗಳು ಸಹಕಾರಿಯಾಗಿವೆ ಎಂದರು.
ಈ ಸಂದರ್ಭದಲ್ಲಿ ಯೋಜನೆಗೆ ವಿಶೇಷವಾಗಿ ಸಹಕರಿಸುತ್ತಿರುವ ಶೇಖರ ಪೂಜಾರಿ ಕಾನೆಕೋಡಿ ಹಾಗೂ ಶಂಕರನಾರಾಯಣ ಐತಾಲ್ ಅವರನ್ನು ಗೌರವಿಸಲಾಯಿತು. ಇದೇ ವೇಳೆ ಒಕ್ಕೂಟಗಳ ನಿಕಟಪೂರ್ವ ಅಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.

ಸಭಾ ಕಾರ್ಯಕ್ರಮಕ್ಕೂ ಮುನ್ನ ಶ್ರೀ ಉಳ್ಳಾಲ್ತಿ ಭಜನಾ ಮಂಡಳಿ ಕಾಂಪ್ರಬೈಲ್ ಹಾಗೂ ಬೃಂದಾವನ ಬಾಲಗೋಕುಲ ನೆಲ್ಲಿ ಶಂಭುಗ ತಂಡಗಳಿಂದ ಭಜನಾ ಸಂಕೀರ್ತನೆ ನಡೆಯಿತು.

ಕಾರ್ಯಕ್ರಮದಲ್ಲಿ ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷ ಪದ್ಮನಾಭ ರೈ, ನೇತಾಜಿ ಯುವಕ ಮಂಡಲ (ರಿ.) ಕಲ್ಲಡ್ಕದ ಗೌರವಾಧ್ಯಕ್ಷ ನಾಗೇಶ್ ಕಲ್ಲಡ್ಕ, ಉದ್ಯಮಿ ಗಣೇಶ್ ಶೆಟ್ಟಿ ಗೋಳ್ತಮಜಲು, ಜಿಲ್ಲಾ ಬಿಜೆಪಿ ಮುಖಂಡ ಸಂದೇಶ್ ಶೆಟ್ಟಿ ಅರೆಬೆಟ್ಟು, ಕಲ್ಲಡ್ಕ ಶ್ರೀರಾಮ ಮಂದಿರದ ಅಧ್ಯಕ್ಷ ಚೆನ್ನಪ್ಪ ಕೋಟ್ಯಾನ್, ಕಲ್ಲಡ್ಕ ವಲಯ ಜನಜಾಗೃತಿ ವೇದಿಕೆ ಅಧ್ಯಕ್ಷ ವೆಂಕಟರಾಯ ಪ್ರಭು, ವಿಟ್ಲ ತಾಲೂಕು ಯೋಜನಾಧಿಕಾರಿ ಸುರೇಶ್ ಗೌಡ, ಕಲ್ಲಡ್ಕ ವಲಯ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಅಧ್ಯಕ್ಷ ಗಣೇಶ್ ನಾಯ್ಕ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಒಕ್ಕೂಟಗಳ ನಿಕಟಪೂರ್ವ ಅಧ್ಯಕ್ಷರಾದ ಶಾಂಭವಿ ಆಚಾರ್ಯ, ದಯಾನಂದ ಗೌಡ, ಸೀತಾ ಆಚಾರ್ಯ, ಸೀತಾರಾಮ್ ಶೆಟ್ಟಿ, ಮಮತಾ, ಉಮಾವತಿ ಹಾಗೂ ಮಮತಾ ಶೆಟ್ಟಿ ಮತ್ತು ನೂತನ ಅಧ್ಯಕ್ಷರಾದ ಚಿದಾನಂದ ಸುವರ್ಣ, ಮಾಧವ ಸಾಲಿಯಾನ್, ಸುನಿಲ್ ನಾಯ್ಕ್, ವೀಣಾ, ಚಂದ್ರಾವತಿ, ಶಾಲಿನಿ ಹಾಗೂ ನಾಗಪ್ಪ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಎಲ್ಲಾ ಒಕ್ಕೂಟಗಳ ಅಧ್ಯಕ್ಷರು, ಪದಾಧಿಕಾರಿಗಳು, ಪ್ರಗತಿಬಂಧು ಸ್ವಸಹಾಯ ಸಂಘಗಳ ಸದಸ್ಯರು ಹಾಗೂ ಕಲ್ಲಡ್ಕ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಭಾಗವಹಿಸಿದ್ದರು.
ಕಲ್ಲಡ್ಕ ವಲಯ ಮೇಲ್ವಿಚಾರಕ ಸುಖರಾಜ್ ಸ್ವಾಗತಿಸಿದರು. ಸೇವಾ ಪ್ರತಿನಿಧಿ ಅಶ್ವಿನಿ ಒಕ್ಕೂಟದ ಸಾಧನಾ ವರದಿ ವಾಚಿಸಿದರು. ಚಿದಾನಂದ ಸುವರ್ಣ ಅನಿಸಿಕೆ ವ್ಯಕ್ತಪಡಿಸಿದರು. ಸೇವಾ ಪ್ರತಿನಿಧಿ ವಿದ್ಯಾ ವಂದಿಸಿದರು. ಸಂತೋಷ್ ಬೊಲ್ಪೊಡಿ ಕಾರ್ಯಕ್ರಮ ನಿರೂಪಿಸಿದರು. ಒಕ್ಕೂಟಗಳ ಸೇವಾ ಪ್ರತಿನಿಧಿಗಳು ಸಹಕರಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಸದಸ್ಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.


