Breaking
20 Aug 2026, Thu

ಪುಂಜಾಲಕಟ್ಟೆಯಲ್ಲಿ ಹಾಡಹಗಲೇ ಬೈಕ್ ಸವಾರನನ್ನು ಅಡ್ಡಗಟ್ಟಿ ₹8 ಲಕ್ಷಕ್ಕೂ ಅಧಿಕ ಹಣ ದರೋಡೆ

ಪುಂಜಾಲಕಟ್ಟೆ: ಬಂಟ್ವಾಳ ತಾಲೂಕಿನ ಮಣಿಹಳ್ಳ–ಕಕ್ಯಪದವು ರಸ್ತೆಯ ಮಣಿನಾಲ್ಕೂರು ಗ್ರಾಮದ ಮುಲ್ಕಾಜೆಮಾಡ ಎಂಬಲ್ಲಿ ಹಾಡಹಗಲೇ ಬೈಕ್ ಸವಾರನನ್ನು ಅಡ್ಡಗಟ್ಟಿ ತಲವಾರು ತೋರಿಸಿ ಬೆದರಿಸಿ ಲಕ್ಷಾಂತರ ರೂಪಾಯಿ ದರೋಡೆ ನಡೆಸಿದ ಘಟನೆ ಗುರುವಾರ (ಆ.20) ನಡೆದಿದೆ.


ಸುರತ್ಕಲ್ ನಿವಾಸಿ ಮಯ್ಯದಿ ಅವರು ವಿವಿಧ ಅಂಗಡಿಗಳಿಗೆ ಸಗಟು ದರದಲ್ಲಿ ಪೂರೈಸಿದ್ದ ಸಿಮೆಂಟ್ನ ಹಣವನ್ನು ವಸೂಲಿ ಮಾಡಿಕೊಂಡು ಬೈಕ್ನಲ್ಲಿ ಹಿಂದಿರುಗುತ್ತಿದ್ದ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದೆ.
ಎರಡು ಬೈಕ್ಗಳಲ್ಲಿ ಬಂದ ನಾಲ್ವರು ಆರೋಪಿಗಳು ಮಯ್ಯದಿ ಅವರ ಬೈಕ್ಗೆ ಅಡ್ಡಗಟ್ಟಿ ತಲವಾರು ತೋರಿಸಿ ಬೆದರಿಸಿದ್ದಾರೆ. ಬಳಿಕ ಅವರ ಬಳಿಯಿದ್ದ ಹಣದ ಬ್ಯಾಗ್ನ್ನು ಕಸಿದುಕೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.


ದರೋಡೆಗೊಳಗಾದ ಬ್ಯಾಗ್ನಲ್ಲಿ ಸುಮಾರು ₹8 ಲಕ್ಷಕ್ಕೂ ಅಧಿಕ ಹಣವಿತ್ತು ಎನ್ನಲಾಗಿದ್ದು, ಆರೋಪಿಗಳು ಹಣವನ್ನು ದೋಚಿಕೊಂಡು ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಘಟನೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಮಾಹಿತಿ ಲಭಿಸಿದ ತಕ್ಷಣ ಗ್ರಾಮಾಂತರ ಠಾಣೆಯ ಇನ್ಸ್ಪೆಕ್ಟರ್ ಅನಂತ ಪದ್ಮನಾಭ ಹಾಗೂ ಎಸ್ಐ ಮಂಜುನಾಥ್ ನೇತೃತ್ವದ ಪೊಲೀಸ್ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.


ಈ ಕುರಿತು ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದು, ಆರೋಪಿಗಳ ಪತ್ತೆಗೆ ವಿವಿಧ ಆಯಾಮಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ದರೋಡೆಗೊಳಗಾದ ಹಣದ ನಿಖರ ಮೊತ್ತ ಸೇರಿದಂತೆ ಘಟನೆಯ ಸಂಪೂರ್ಣ ವಿವರಗಳು ಪೊಲೀಸ್ ತನಿಖೆಯ ಬಳಿಕ ಸ್ಪಷ್ಟವಾಗಬೇಕಿದೆ.

Leave a Reply

Your email address will not be published. Required fields are marked *