ಕಾಸರಗೋಡು: ಬೋವಿಕ್ಕಾನ ಸಮೀಪದ ಪೊವ್ವಲ್ ಮಾಸ್ತಿಕುಂಡುವಿನಲ್ಲಿ ಶಾಲಾ ಬಸ್ ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ 25 ವರ್ಷದ ಯುವಕ ಮೃತಪಟ್ಟ ಘಟನೆ ಗುರುವಾರ(ಆ.20) ಬೆಳಗ್ಗೆ ನಡೆದಿದೆ.

ಮೃತಪಟ್ಟವರನ್ನು ಗಾಳಿಮುಖ ನೆಟ್ಟಣಿಗೆಯ ಹೊಸಹಿತ್ತಿಲಿನ ಎಸ್. ಶಮ್ಮಾಸ್ ಅಬ್ದುಲ್ಲಾ (25) ಎಂದು ಗುರುತಿಸಲಾಗಿದೆ. ಚೆರ್ಕಳದಿಂದ ಗಾಳಿಮುಖದತ್ತ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಮಾಸ್ತಿಕುಂಡುವಿನಲ್ಲಿ ಎದುರಿನಿಂದ ಬಂದ ಖಾಸಗಿ ಶಾಲಾ ಬಸ್ ಬೈಕ್‌ಗೆ ಡಿಕ್ಕಿ ಹೊಡೆದಿದೆ.

ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಶಮ್ಮಾಸ್ ಅವರನ್ನು ಕಾಸರಗೋಡಿನ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಆದೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.



