ಮಂಗಳೂರು: ಸುಮಾರು 15 ವರ್ಷಗಳಿಂದ ನ್ಯಾಯಾಲಯದ ಎಲ್ಪಿಸಿ (LPC) ವಾರೆಂಟ್ಗೆ ತಲೆಮರೆಸಿಕೊಂಡಿದ್ದ ಆರೋಪಿತೆಯನ್ನು ಮಂಗಳೂರು ನಗರ ಮಹಿಳಾ ಪೊಲೀಸ್ ಠಾಣೆಯ ಪೊಲೀಸರು ಪತ್ತೆಹಚ್ಚಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಮಂಗಳೂರು ನಗರ ಮಹಿಳಾ ಪೊಲೀಸ್ ಠಾಣೆಯಲ್ಲಿ 2011ರಲ್ಲಿ ಅನೈತಿಕ ಮಾನವ ಸಾಗಣೆ ತಡೆ ಕಾಯ್ದೆಯ ವಿವಿಧ ಸೆಕ್ಷನ್ಗಳಡಿ ಪ್ರಕರಣ ದಾಖಲಾಗಿತ್ತು. ಪ್ರಕರಣವು ಮಂಗಳೂರಿನ 3ನೇ ಜೆಎಂಎಫ್ಸಿ ನ್ಯಾಯಾಲಯದಲ್ಲಿ SPLIT CC ನಂ. 02/2014ರಂತೆ ವಿಚಾರಣೆಯಲ್ಲಿದ್ದು, LPC ನಂ. 10/2019ರಂತೆ ದೀರ್ಘಕಾಲದಿಂದ ಬಾಕಿ ಉಳಿದಿತ್ತು.

ಈ ಪ್ರಕರಣದಲ್ಲಿ ಎಲ್ಪಿಸಿ ವಾರೆಂಟ್ಗೊಳಗಾಗಿದ್ದ ಆರೋಪಿತೆ ತನ್ನ ಹೆಸರು ಆಯಿಷಾ (36), ಪತಿ ಹಸನಬ್ಬ, ಬಂಗ್ಲಗುಡ್ಡೆ ಮನೆ, ಗುರುಪುರ, ಮಂಗಳೂರು ಎಂದು ಮಾಹಿತಿ ನೀಡಿದ್ದಳು. ಆದರೆ ಪ್ರಕರಣ ದಾಖಲಾಗಿ ಬಂಧನಕ್ಕೊಳಗಾದ ಸಂದರ್ಭದಲ್ಲಿ ತನ್ನ ನಿಜವಾದ ಹೆಸರು, ಪತಿಯ ಹೆಸರು ಹಾಗೂ ವಿಳಾಸವನ್ನು ಮರೆಮಾಚಿ ಸುಳ್ಳು ಮಾಹಿತಿ ನೀಡಿರುವುದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.

ಆರೋಪಿತೆಯ ನಿಜವಾದ ಹೆಸರು ಸೆಫಿಯಾ (53), ಪತಿ ದಿವಂಗತ ಅಬೂಬುಕ್ಕರ್, ಹಂಡೇಲ ಮಸೀದಿ ಬಳಿ, ಪುತ್ತಿಗೆ ಗ್ರಾಮ, ಬಡಗಮಿಜಾರು, ಮಿಜಾರು, ಮೂಡಬಿದರೆ ತಾಲೂಕು, ಮಂಗಳೂರು ಎಂಬುದು ಪತ್ತೆಯಾಗಿದೆ. ಹೆಸರು ಹಾಗೂ ವಿಳಾಸ ಬದಲಿಸಿಕೊಂಡು ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ಸುಮಾರು 15 ವರ್ಷಗಳಿಂದ ತಲೆಮರೆಸಿಕೊಂಡಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿತೆಯ ಬೆರಳಚ್ಚನ್ನು ಮಂಗಳೂರು ಬೆರಳಚ್ಚು ಘಟಕದ ತಜ್ಞರು ಪರಿಶೀಲಿಸಿದ್ದು, ಆಯಿಷಾ ಹೆಸರಿನಲ್ಲಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ 2011ರ ಪ್ರಕರಣದ ಕಡತದಲ್ಲಿನ ಬೆರಳಚ್ಚಿನೊಂದಿಗೆ ಹೋಲಿಕೆಯಾಗಿರುವುದಾಗಿ ವರದಿ ನೀಡಿದ್ದಾರೆ.

ಈ ವರದಿಯ ಆಧಾರದ ಮೇಲೆ ಮಹಿಳಾ ಪೊಲೀಸ್ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿ ಆರೋಪಿತೆಯನ್ನು ಪತ್ತೆಹಚ್ಚಿ ಆ.18ರಂದು ಬಂಧಿಸಿದ್ದಾರೆ. ಬಳಿಕ ಆರೋಪಿತೆಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.


