Breaking
19 Aug 2026, Wed

ಡಿಸಿ ಮನ್ನಾ ಜಮೀನು ಹಂಚಿಕೆ: ಕೆಪಿಸಿಸಿ ಅಧ್ಯಕ್ಷರನ್ನು ಭೇಟಿಯಾದ ದಲಿತ ನಾಯಕರು

ಬೆಂಗಳೂರು: ಪ.ಜಾತಿ ಹಾಗೂ ಪ.ಪಂಗಡಗಳ ಹಲವು ವರ್ಷಗಳ ಬೇಡಿಕೆಯಾಗಿರುವ ಡಿಸಿ ಮನ್ನಾ ಜಮೀನು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರನ್ನು ತಾಲೂಕಿನ ದಲಿತ ನಾಯಕರ ನಿಯೋಗ ಬೆಂಗಳೂರಿನಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿತು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಹಾಗೂ ಬ್ಲಾಕ್ ಕಾಂಗ್ರೆಸ್ (ನಗರ) ಅಧ್ಯಕ್ಷ ಸತೀಶ್ ಕೆ. ಕಾಶಿಪಟ್ಣ ಅವರ ನೇತೃತ್ವದಲ್ಲಿ ದಲಿತ ನಾಯಕರು ಕೆಪಿಸಿಸಿ ಅಧ್ಯಕ್ಷರನ್ನು ಭೇಟಿಯಾಗಿ, ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಲಾಗಿದ್ದ ಡಿಸಿ ಮನ್ನಾ ಜಮೀನು ಹಂಚಿಕೆ ವಿಚಾರವನ್ನು ಸರ್ಕಾರದ ಮಟ್ಟದಲ್ಲಿ ಶೀಘ್ರ ಕಾರ್ಯಗತಗೊಳಿಸುವಂತೆ ಗಮನ ಸೆಳೆದರು.

ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಡಿಸಿ ಮನ್ನಾ ಜಮೀನು ಹಂಚಿಕೆ ಕುರಿತು ಭರವಸೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಣಾಳಿಕೆಯ ಭಾಗವಾಗಿರುವ ಈ ಬೇಡಿಕೆಗೆ ಸರ್ಕಾರದ ಮಟ್ಟದಲ್ಲಿ ಆದೇಶ ನೀಡುವಂತೆ ಕೆಪಿಸಿಸಿ ಅಧ್ಯಕ್ಷರ ಗಮನಕ್ಕೆ ತರಲಾಯಿತು.

ಮನವಿಗೆ ಸ್ಪಂದಿಸಿದ ಬಿ.ಕೆ. ಹರಿಪ್ರಸಾದ್ ಅವರು ಡಿಸಿ ಮನ್ನಾ ಜಮೀನು ಹಂಚಿಕೆ ವಿಚಾರವಾಗಿ ಕಂದಾಯ ಸಚಿವರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಮಾತುಕತೆ ನಡೆಸುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಹಾಗೂ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಶೇಖರ್ ಕುಕ್ಕೇಡಿ, ದಲಿತ ಮುಖಂಡರಾದ ಗಣೇಶ್ ಪ್ರಸಾದ್ ಮೂಡಬಿದಿರೆ, ಬಿ.ಕೆ. ವಸಂತ್, ಬೇಬಿ ಸುವರ್ಣ, ವೆಂಕಣ್ಣ ಕೊಯ್ಯೂರು, ನೇಮಿರಾಜ್ ಕಿಲ್ಲೂರು, ರಮೇಶ್ ಆರ್., ರವಿಚಂದ್ರ ನಾಯ್ಕ್ ಮುಂಡಾಜೆ, ಪ್ರಭಾಕರ್ ಶಾಂತಿಗೋಡು, ಚೆನ್ನಕೇಶವ ಹಾಗೂ ಶೇಖರ್ ಲಾಯಿಲ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *