Breaking
29 Sep 2026, Tue

ಕರ್ನಾಟಕ ವಿಧಾನಸಭೆಯ ನೂತನ ಸಭಾಧ್ಯಕ್ಷರಾಗಿ ಜಿ.ಎಸ್. ಪಾಟೀಲ್ ಅವಿರೋಧ ಆಯ್ಕೆ

ಬೆಂಗಳೂರು: ಕರ್ನಾಟಕ ವಿಧಾನಸಭೆಯ ನೂತನ ಸಭಾಧ್ಯಕ್ಷರಾಗಿ ರೋಣ ಕ್ಷೇತ್ರದ ಶಾಸಕ ಗುರುಪಾದಗೌಡ ಸಂಗನಗೌಡ ಪಾಟೀಲ್ (ಜಿ.ಎಸ್. ಪಾಟೀಲ್) ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.


ಸಭಾಧ್ಯಕ್ಷ ಸ್ಥಾನಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಜಿ.ಎಸ್. ಪಾಟೀಲ್ ಅವರ ಹೆಸರನ್ನು ಸೂಚಿಸಿದ್ದು, ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು ಅನುಮೋದಿಸಿದರು. ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಹಾಗೂ ವಿರೋಧಪಕ್ಷದ ನಾಯಕ ಆರ್. ಅಶೋಕ್ ಅವರು ನೂತನ ಸಭಾಧ್ಯಕ್ಷರನ್ನು ಪೀಠಕ್ಕೆ ಕರೆತಂದರು.


ಜಿ.ಎಸ್. ಪಾಟೀಲ್ ಅವರು ಕೃಷಿ ಹಿನ್ನೆಲೆಯ ಕುಟುಂಬದಿಂದ ಬಂದವರಾಗಿದ್ದು, ರಾಜಕೀಯದಲ್ಲಿ ಸುದೀರ್ಘ ಅನುಭವ ಹೊಂದಿದ್ದಾರೆ. ಈ ಹಿಂದೆ ಎಂಟು ಬಾರಿ ಚುನಾವಣೆಗೆ ಸ್ಪರ್ಧಿಸಿ ನಾಲ್ಕು ಬಾರಿ ಗೆಲುವು ಸಾಧಿಸಿದ್ದಾರೆ. ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷ ಎರಡರಲ್ಲೂ ಕಾರ್ಯನಿರ್ವಹಿಸಿದ ಅನುಭವ ಅವರಿಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸದನದಲ್ಲಿ ಪ್ರಸ್ತಾಪಿಸಿದರು.


ಜಿ.ಎಸ್. ಪಾಟೀಲ್ ಅವರ ಆಯ್ಕೆಗೆ ಎಐಸಿಸಿಯೂ ಅನುಮೋದನೆ ನೀಡಿದೆ. ನೂತನ ಸಭಾಧ್ಯಕ್ಷರಿಗೆ ಸದನದಲ್ಲಿ ಹಾಜರಿದ್ದ ಸದಸ್ಯರು ಶುಭಾಶಯ ಕೋರಿದರು.

Leave a Reply

Your email address will not be published. Required fields are marked *