ಬಂಟ್ವಾಳ: ಕರ್ನಾಟಕ ಯಕ್ಷಗಾನ ಅಕಾಡೆಮಿ ಘೋಷಿಸಿರುವ ‘ಯಕ್ಷಸಿರಿ’ ಪ್ರಶಸ್ತಿಗೆ ಬಂಟ್ವಾಳ ತಾಲೂಕಿನ ಕೋಡಪದವು ಕುಕ್ಕಿಲ ನಿವಾಸಿ, ಪರಂಪರೆಯ ಶೈಲಿಯ ಹವ್ಯಾಸಿ ಭಾಗವತೆ ದುರ್ಗಾಪರಮೇಶ್ವರಿ ಕುಕ್ಕಿಲ ಅವರು ಆಯ್ಕೆಯಾಗಿದ್ದಾರೆ.

ಸುಮಾರು 39 ವರ್ಷಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ 55 ವರ್ಷದ ಹವ್ಯಾಸಿ ಮಹಿಳಾ ಭಾಗವತೆ ದುರ್ಗಾಪರಮೇಶ್ವರಿ ಕುಕ್ಕಿಲ ಅವರು ಪ್ರಸಿದ್ಧ ಭಾಗವತ ಮಾಂಬಾಡಿ ನಾರಾಯಣ ಭಾಗವತರ ಮೊಮ್ಮಗಳು ಹಾಗೂ ಕೋಡಪದವು ನಿವಾಸಿ, ಪ್ರಗತಿಪರ ಕೃಷಿಕ ಪುರಂದರವಿಠಲ ಕುಕ್ಕಿಲ ಅವರ ಪತ್ನಿ.
1971ರ ಮೇ 30ರಂದು ಕಾಸರಗೋಡು ಜಿಲ್ಲೆಯ ಬಾಯಾರು ಗ್ರಾಮದ ಕೆರೆಮೂಲೆಯಲ್ಲಿ ಕೃಷ್ಣ ಭಟ್ಟ ಮತ್ತು ದ್ರೌಪದಿ ಅಮ್ಮ ದಂಪತಿಯ ಪುತ್ರಿಯಾಗಿ ಜನಿಸಿದ ಅವರು, ಬಾಲ್ಯದಲ್ಲೇ ಯಕ್ಷಗಾನದತ್ತ ಆಕರ್ಷಿತರಾದರು. ಅವರ ತಾಯಿಯ ತಂದೆ ಪ್ರಸಿದ್ಧ ಕಲಾವಿದ ಮಾಂಬಾಡಿ ನಾರಾಯಣ ಭಾಗವತರು. ಸೋದರಮಾವ ಯಕ್ಷಗುರು ಮಾಂಬಾಡಿ ಸುಬ್ರಹ್ಮಣ್ಯ ಭಟ್ಟ ಅವರೂ ಹಿಮ್ಮೇಳ ಗುರುಗಳಾಗಿದ್ದಾರೆ.

ಸಹೋದರರಾದ ಶಂಕರನಾರಾಯಣ ಭಟ್ ಬಾಯಾರು ಹಾಗೂ ನಾರಾಯಣ ಭಟ್ ಅವರು ಅಜ್ಜ ಮಾಂಬಾಡಿ ನಾರಾಯಣ ಭಾಗವತರಲ್ಲಿ ಯಕ್ಷಗಾನದ ಹಿಮ್ಮೇಳ ಅಭ್ಯಾಸ ಮಾಡುತ್ತಿದ್ದದ್ದು ದುರ್ಗಾಪರಮೇಶ್ವರಿ ಅವರ ಕಲಿಕೆಗೆ ಪ್ರೇರಣೆಯಾಯಿತು. ಅಣ್ಣ ನಾರಾಯಣ ಭಟ್ ಅವರಿಂದ ಪೂರ್ವರಂಗದ ಪಾಠಗಳನ್ನು ಕಲಿತ ಅವರು, 1987ರಲ್ಲಿ ಮೊದಲ ಬಾರಿಗೆ ಬಯಲಾಟದ ವೇದಿಕೆಯಲ್ಲಿ ಭಾಗವತಿಕೆ ಮಾಡಿದರು.

1993ರಿಂದ ಆಕಾಶವಾಣಿ ಕಲಾವಿದೆಯಾಗಿ ಗುರುತಿಸಿಕೊಂಡಿರುವ ಅವರು, ವಿವಿಧ ಸಂಘ-ಸಂಸ್ಥೆಗಳ ಹವ್ಯಾಸಿ ಯಕ್ಷಗಾನ ಪ್ರದರ್ಶನಗಳು, ತಾಳಮದ್ದಳೆ, ಮಹಿಳಾ ಹಾಗೂ ಮಕ್ಕಳ ಯಕ್ಷಗಾನ ಕಾರ್ಯಕ್ರಮಗಳಲ್ಲಿ ಭಾಗವತರಾಗಿ ವೇದಿಕೆಯೇರಿದ್ದಾರೆ. ಬೆಂಗಳೂರಿನ ದೂರದರ್ಶನದಲ್ಲಿಯೂ ಯಕ್ಷಗಾನ ಪ್ರದರ್ಶನ ನೀಡಿದ್ದಾರೆ.

ಯಕ್ಷಸಿರಿ ಪ್ರಶಸ್ತಿಗೆ ಆಯ್ಕೆಯಾಗಿರುವುದು ಸಂತಸ ತಂದಿದೆ ಎಂದು ದುರ್ಗಾಪರಮೇಶ್ವರಿ ಕುಕ್ಕಿಲ ಅವರು ತಿಳಿಸಿದ್ದಾರೆ.


