Breaking
29 Sep 2026, Tue

ಎಲ್.ಸಿ.ಆರ್. ವಿದ್ಯಾಸಂಸ್ಥೆಯಲ್ಲಿ ‘ಕೆಸರು ಗದ್ದೆ–ಗ್ರಾಮ್ಯ ಗಮ್ಮತ್ತು’ ಕಾರ್ಯಕ್ರಮ

ಕಕ್ಯಪದವು: ಪಾದೆಗುತ್ತು ಲಿಂಗಪ್ಪ ಮಾಸ್ತರ್ ಎಜುಕೇಷನಲ್ ಟ್ರಸ್ಟ್ (ರಿ.) ವತಿಯಿಂದ ನಡೆಸಲ್ಪಡುವ ಎಲ್.ಸಿ.ಆರ್. ಇಂಡಿಯನ್ ವಿದ್ಯಾಸಂಸ್ಥೆ, ಕಕ್ಯಪದವು ಇಲ್ಲಿನ ಪದವಿ ಪೂರ್ವ ಹಾಗೂ ಪದವಿ ಕಾಲೇಜು ಮತ್ತು ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ‘ಕೆಸರು ಗದ್ದೆ–ಗ್ರಾಮ್ಯ ಗಮ್ಮತ್ತು’ ಕಾರ್ಯಕ್ರಮ ಆ.13ರಂದು ಕಕ್ಯಪದವಿನ ಪ್ರಗತಿಪರ ಕೃಷಿಕ ವಿಠಲ ಭಂಡಾರಿ ಪುಣ್ಕೆದಡಿ ಅವರ ಗದ್ದೆಯಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಚೇತನ್ ಊರ್ದೊಟ್ಟು ಉದ್ಘಾಟಿಸಿ, ಕೆಸರುಗದ್ದೆ ಕೂಟಗಳ ಮೂಲಕ ವಿದ್ಯಾರ್ಥಿಗಳಲ್ಲಿ ತುಳುನಾಡಿನ ಮಣ್ಣಿನ ಸಂಸ್ಕೃತಿ ಹಾಗೂ ಕೃಷಿ ಪರಂಪರೆಯ ಅರಿವು ಮೂಡಿಸಲು ಸಾಧ್ಯ. ಕೃಷಿ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಅಗತ್ಯವಿದೆ ಎಂದರು.

ಗೌರವ ಉಪಸ್ಥಿತರಿದ್ದ ಸಿತಾರ್ ಆರ್. ಭಂಡಾರಿ ಮಾತನಾಡಿ, ತುಳುನಾಡಿನ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸುವುದರಿಂದ ತುಳು ಸಂಸ್ಕೃತಿ ಹಾಗೂ ಕೃಷಿ ಸಂಸ್ಕೃತಿಯ ಬಗ್ಗೆ ಅರಿವು ಮೂಡುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಪ್ರಗತಿಪರ ಕೃಷಿಕರಾದ ವಿಠಲ ಭಂಡಾರಿ, ರಾಮಯ್ಯ ಭಂಡಾರಿ, ಗೋಪಾಲ ಭಂಡಾರಿ, ಲಕ್ಷ್ಮಣ ಭಂಡಾರಿ ಹಾಗೂ ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆ ಉಳಿಬೈಲಿನ ಸಹಶಿಕ್ಷಕ ಅಕ್ಬರ್ ಆಲಿ ಉಪಸ್ಥಿತರಿದ್ದರು.

ಎಲ್.ಸಿ.ಆರ್. ಇಂಡಿಯನ್ ವಿದ್ಯಾಸಂಸ್ಥೆಯ ಅಧ್ಯಕ್ಷೆ ಬಬಿತಾ ಆರ್. ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಕಾರ್ಯದರ್ಶಿ ಶಿವಾನಿ ಆರ್. ನಾಥ್, ಸಂಯೋಜಕ ಯಶವಂತ ಜಿ. ನಾಯಕ್, ಮುಖ್ಯೋಪಾಧ್ಯಾಯಿನಿ ವಿಜಯಾ ಕೆ. ಉಪಸ್ಥಿತರಿದ್ದರು. ಪ್ರಾಂಶುಪಾಲ ಜೋಸ್ಟನ್ ಲೋಬೊ ಶುಭಹಾರೈಸಿದರು.

ರಾಷ್ಟ್ರೀಯ ಸೇವಾ ಯೋಜನಾ ಘಟಕದ ಯೋಜನಾಧಿಕಾರಿ ವಿಂದ್ಯಾಶ್ರೀ ಎ. ಸ್ವಾಗತಿಸಿದರು. ವಾಣಿಜ್ಯ ಉಪನ್ಯಾಸಕ ಮನೋಜ್ ವಂದಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ಪೃಥ್ವಿರಾಜ್ ಕಾರ್ಯಕ್ರಮ ನಿರೂಪಿಸಿದರು.

ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಉತ್ಸಾಹದಿಂದ ಕೆಸರಿನ ಆಟಗಳು ಸೇರಿದಂತೆ ವಿವಿಧ ಗ್ರಾಮೀಣ ಕ್ರೀಡೆಗಳಲ್ಲಿ ಪಾಲ್ಗೊಂಡರು. ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳಲ್ಲಿ ಸಹಕಾರ, ಸ್ನೇಹ, ಕ್ರೀಡಾಸ್ಫೂರ್ತಿ ಹಾಗೂ ತುಳುನಾಡಿನ ಸಾಂಸ್ಕೃತಿಕ ಪರಂಪರೆಯ ಅರಿವು ಮೂಡಿಸಲಾಯಿತು. ಗ್ರಾಮೀಣ ಜೀವನಶೈಲಿ ಮತ್ತು ಕೃಷಿ ಸಂಸ್ಕೃತಿಯ ಮಹತ್ವವನ್ನು ಪರಿಚಯಿಸುವ ಮೂಲಕ ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ಸಂತಸ ಹಾಗೂ ಹೊಸ ಉತ್ಸಾಹ ನೀಡಿತು.

Leave a Reply

Your email address will not be published. Required fields are marked *