ಬಂಟ್ವಾಳ: ತಾಲೂಕು ಕುಲಾಲ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘ (ರಿ.) ಇದರ 7ನೇ ವಾರ್ಷಿಕ ಮಹಾಸಭೆ ಹಾಗೂ 72 ವರ್ಷ ತುಂಬಿದ ಹಿರಿಯ ನಾಗರಿಕರ ಸನ್ಮಾನ ಕಾರ್ಯಕ್ರಮವು ಪೊಸಳ್ಳಿ ಬಿ.ಸಿ.ರೋಡ್ನ ಕುಲಾಲ ಸಮುದಾಯ ಭವನದಲ್ಲಿ ನಡೆಯಿತು.

ಸಂಘದ ಅಧ್ಯಕ್ಷ ಸೋಮಯ್ಯ ಹನೈನಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಘದ ಬೆಳವಣಿಗೆಗೆ ಎಲ್ಲರ ಸಹಕಾರ ಅಗತ್ಯವಾಗಿದ್ದು, ಸಂಘದ ಕಚೇರಿಗಾಗಿ ಈಗಾಗಲೇ ನಿವೇಶನ ಹುಡುಕಲಾಗುತ್ತಿದೆ. ಸ್ವಂತ ಕಚೇರಿ ಹೊಂದುವುದರಿಂದ ಕಷ್ಟದಲ್ಲಿರುವ ಹಿರಿಯ ನಾಗರಿಕರಿಗೆ ಹೆಚ್ಚಿನ ನೆರವು ನೀಡಲು ಅನುಕೂಲವಾಗಲಿದೆ ಎಂದು ಅವರು ಹೇಳಿದರು.

ಉದ್ಯಮಿ, ಶಿಲ್ಪಾ ಪ್ರಾಡಕ್ಟ್ಸ್ ಬೆಂಗಳೂರು ಇದರ ರಮೇಶ್ ಬಾಳೆಹಿತ್ಲು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, 60 ವರ್ಷ ಪೂರೈಸಿದವರು ತಮ್ಮನ್ನು ವೃದ್ಧರೆಂದು ಭಾವಿಸದೆ ಹಿರಿಯರೆಂದು ಗುರುತಿಸಿಕೊಂಡಾಗ ಸಮಾಜದ ಕಿರಿಯರಿಗೆ ಮಾರ್ಗದರ್ಶನ ನೀಡಲು ಸಾಧ್ಯವಾಗುತ್ತದೆ. ಹಿರಿಯರ ಮಾರ್ಗದರ್ಶನದ ಕೊರತೆಯಿಂದ ಇಂದಿನ ಯುವಪೀಳಿಗೆ ದಾರಿ ತಪ್ಪುತ್ತಿರುವುದನ್ನು ಕಾಣಬಹುದು. ಇಂತಹ ಸಂದರ್ಭದಲ್ಲಿ ಹಿರಿಯ ನಾಗರಿಕರ ಸಂಘಗಳ ಮಾರ್ಗದರ್ಶನ ಅತ್ಯಂತ ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.

ಮುಖ್ಯ ಅತಿಥಿಗಳಾಗಿ ಕುಲಾಲ ಸುಧಾರಕ ಸಂಘ ಬಂಟ್ವಾಳದ ಅಧ್ಯಕ್ಷ ರಮೇಶ್ ಸಂಚಯಗಿರಿ ಹಾಗೂ ಕರ್ನಾಟಕ ರಾಜ್ಯ ಕರಾವಳಿ ಕುಲಾಲ ಕುಂಬಾರ ಯುವವೇದಿಕೆ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಸುಮಿತ್ ಸಾಲಿಯಾನ್ ಸೋರ್ನಾಡ್ ಭಾಗವಹಿಸಿದ್ದರು.

72 ವರ್ಷ ತುಂಬಿದ ಪದ್ಮನಾಭ ಎಂ., ಟಿ. ಶೇಷಪ್ಪ ಮಾಸ್ಟರ್, ಕೃಷ್ಣಪ್ಪ ಬಡ್ಡಕಟ್ಟೆ, ರಾಮಚಂದ್ರ ಮಾಸ್ಟರ್, ಭೋಜ ಬಂಗೇರ, ಧರ್ಮಣ ಬಡ್ಡಕಟ್ಟೆ ಹಾಗೂ ಗಂಗಾಧರ ಮಾಸ್ಟರ್ ಅವರನ್ನು ಮತ್ತು ಪ್ರತಿಭಾವಂತ ಬಾಲಕಿ ಕು. ಕೃತಿ ಬಿ. ಅವರನ್ನು ವೇದಿಕೆಯಲ್ಲಿ ಹಾರ, ಶಾಲು, ಪೇಟ, ಫಲಪುಷ್ಪ ಹಾಗೂ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.

ಸನ್ಮಾನಿತರ ವಿವರಗಳನ್ನು ಉಪಾಧ್ಯಕ್ಷೆ ರತ್ನಾವತಿ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾದ ಸೋಮಪ್ಪ ಮೂಲ್ಯ, ಎಂ. ನಾರಾಯಣ ಮಾಸ್ಟರ್, ರಾಮ ಮೂಲ್ಯ ಮತ್ತು ಶಾಂಭವಿ ಹನೈನಡೆ ವಾಚಿಸಿದರು.

ವರದಿ ವರ್ಷದಲ್ಲಿ ಅಗಲಿದ ಸಂಘದ ಸದಸ್ಯರಾದ ಭೋಜ ಮೂಲ್ಯ ಕುರ್ನಾಡ್ ಹಾಗೂ ಗೋಪಾಲ ಮಾಸ್ಟರ್ ಇರಾ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಇದರ ವಿವರವನ್ನು ನಾರಾಯಣ ಮೂಲ್ಯ ಭಂಡಾರಿಬೆಟ್ಟು ನೀಡಿದರು. ಸನ್ಮಾನಿತರ ಪರವಾಗಿ ಪದ್ಮನಾಭ ಎಂ. ಹಾಗೂ ರಾಮಚಂದ್ರ ಮಾಸ್ಟರ್ ಅನಿಸಿಕೆ ವ್ಯಕ್ತಪಡಿಸಿದರು.
ಶ್ರೀಮತಿ ಶಾಂಭವಿ ಹನೈನಡೆ ಪ್ರಾರ್ಥನೆ ಹಾಡಿದರು. ಜತೆ ಕಾರ್ಯದರ್ಶಿ ಕಿಟ್ಟು ಮೂಲ್ಯ ಸ್ವಾಗತಿಸಿದರು. ಗೌರವಾಧ್ಯಕ್ಷ ಟಿ. ಶೇಷಪ್ಪ ಮಾಸ್ಟರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಗೌರವ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಖಂಡಿಗ ವರದಿ ಮಂಡಿಸಿದರು. ಕೋಶಾಧಿಕಾರಿ ಲೆಕ್ಕಪತ್ರ ಮಂಡಿಸಿದರು.

ವೇದಿಕೆಯಲ್ಲಿ ಉಪಾಧ್ಯಕ್ಷ ವಿಠ್ಠಲ ಮೂಲ್ಯ, ಸ್ಥಾಪಕಾಧ್ಯಕ್ಷ ಸುಂದರ್ ಬಿ. ಕುಲಾಲ್, ಕಾರ್ಯಕಾರಿ ಸಮಿತಿ ಸದಸ್ಯರಾದ ಶೀನ ಮೂಲ್ಯ ಹಾಗೂ ನೀಲಪ್ಪ ಸಾಲಿಯಾನ್ ಉಪಸ್ಥಿತರಿದ್ದರು.
ಸಂಘಟನಾ ಕಾರ್ಯದರ್ಶಿ ವಿಶ್ವನಾಥ ಸಾಲಿಯಾನ್ ಧನ್ಯವಾದ ಸಲ್ಲಿಸಿದರು. ಎಚ್.ಕೆ. ನೈನಾಡು ಕಾರ್ಯಕ್ರಮ ನಿರೂಪಿಸಿದರು.


