ಬೆಂಗಳೂರು: ಬೈಕ್ನಿಂದ ಕೆಳಗೆ ಬಿದ್ದ ಮಹಿಳೆಯ ಮೇಲೆ ಸರಕು ಸಾಗಣೆ ವಾಹನ ಹರಿದು ಮಹಿಳೆ ಸ್ಥಳದಲ್ಲೇ ಮೃತಪಟ್ಟ ಘಟನೆ ಎಲೆಕ್ಟ್ರಾನಿಕ್ ಸಿಟಿ ಸಂಚಾರ ಠಾಣಾ ವ್ಯಾಪ್ತಿಯ ಹೆಬ್ಬಗೋಡಿಯ ಅನಂತ ನಗರದಲ್ಲಿ ಬುಧವಾರ ಬೆಳಗ್ಗೆ ನಡೆದಿದೆ.

ಕೇರಳ ಮೂಲದ ಮೇದಾ (32) ಮೃತ ಮಹಿಳೆ. ಕೆಲ ವರ್ಷಗಳ ಹಿಂದೆ ಕುಟುಂಬ ಸಮೇತ ಬೆಂಗಳೂರಿಗೆ ಬಂದಿದ್ದ ಅವರು ಎಲೆಕ್ಟ್ರಾನಿಕ್ ಸಿಟಿಯ ಭವಿಷ್ಯನಿಧಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು.

ಬುಧವಾರ ಬೆಳಗ್ಗೆ ಸುಮಾರು 9 ಗಂಟೆಗೆ ಮೇದಾ ಅವರು ಸ್ನೇಹಿತ ಅಜಯ್ ಗುರು ಜತೆ ಬೈಕ್ನಲ್ಲಿ ಅನಂತ ನಗರದಿಂದ ಸಿಂಗಸಂದ್ರ ಕಡೆಗೆ ತೆರಳುತ್ತಿದ್ದರು. ಈ ವೇಳೆ ಮುಂದೆ ಸಾಗುತ್ತಿದ್ದ ಕಾರು ಚಾಲಕ ರಸ್ತೆ ಗುಂಡಿ ತಪ್ಪಿಸಲು ಏಕಾಏಕಿ ಬ್ರೇಕ್ ಹಾಕಿದ್ದಾನೆ. ಪರಿಣಾಮ ಅಜಯ್ ಗುರು ಕೂಡ ಬೈಕ್ಗೆ ಬ್ರೇಕ್ ಹಾಕಿದ್ದು, ಹಿಂಬದಿ ಕುಳಿತಿದ್ದ ಮೇದಾ ರಸ್ತೆಗೆ ಬಿದ್ದಿದ್ದಾರೆ. ಇದೇ ವೇಳೆ ಹಿಂದಿನಿಂದ ಬಂದ ಸರಕು ಸಾಗಣೆ ವಾಹನ ಮೇದಾ ಅವರ ಮೇಲೆ ಹರಿದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಸಂಚಾರ ಪೊಲೀಸರು ಪರಿಶೀಲನೆ ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಬಳಿಕ ಕಾನೂನು ಪ್ರಕ್ರಿಯೆ ಕೈಗೊಂಡಿದ್ದಾರೆ.

ಮೇದಾ ಅವರ ಸಾವಿಗೆ ರಸ್ತೆ ಗುಂಡಿಯೇ ಪ್ರಮುಖ ಕಾರಣ ಎಂದು ಆರೋಪಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದರು. ಐಟಿ ಸಿಟಿ ಎಂದೇ ಖ್ಯಾತವಾಗಿರುವ ಎಲೆಕ್ಟ್ರಾನಿಕ್ ಸಿಟಿಯ ರಸ್ತೆಗಳು ಗುಂಡಿಗಳಿಂದ ತುಂಬಿದ್ದು, ಪದೇಪದೆ ಅಪಘಾತಗಳು ಸಂಭವಿಸುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಸ್ತೆ ಹದಗೆಟ್ಟು ಹಲವು ವರ್ಷಗಳಾದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಅಮಾಯಕ ಮಹಿಳೆಯೊಬ್ಬರ ಜೀವ ಬಲಿಯಾಗಿದೆ ಎಂದು ಸ್ಥಳೀಯರು ಆರೋಪಿಸಿದರು. ಮೃತ ಮೇದಾ ಅವರಿಗೆ ನಾಲ್ಕು ವರ್ಷದ ಮಗುವಿದ್ದು, ಇದೀಗ ಆ ಮಗುವಿನ ಭವಿಷ್ಯವೇನು ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು.


