ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸಮಾಜಸೇವಕಿ ಹಾಗೂ ಕಾಂಗ್ರೆಸ್ ನಾಯಕಿ ಶ್ರೀಮತಿ ಶೈಲಜಾ ರಾಜೇಶ್ ಅವರು ನಾಮಪತ್ರ ಸಲ್ಲಿಸಿದ್ದಾರೆ.

ಸದಾ ನಗುವಿನ ಮುಖದೊಂದಿಗೆ ಜನರ ನಡುವೆ ಬೆರೆತು, ಅನ್ಯಾಯವನ್ನು ತಡೆದು ನ್ಯಾಯಕ್ಕಾಗಿ ಧ್ವನಿ ಎತ್ತುವ ನಾಯಕಿಯಾಗಿ ಗುರುತಿಸಿಕೊಂಡಿರುವ ಶೈಲಜಾ ರಾಜೇಶ್ ಅವರು ಕ್ರೀಡಾ, ಸಾಂಸ್ಕೃತಿಕ ಹಾಗೂ ಸಾಹಿತ್ಯ ಕ್ಷೇತ್ರಗಳಲ್ಲಿ ಅಪ್ರತಿಮ ಸಾಧನೆ ಮಾಡಿರುವ ಬಹುಮುಖ ಪ್ರತಿಭೆಯಾಗಿದ್ದಾರೆ.

ಅವರು ಸ್ಥಾಪಿಸಿರುವ ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ ಮೂಲಕ ತಾವು ಸಂಪಾದಿಸಿದ ಹಣದಲ್ಲೇ ಲೆಕ್ಕವಿಲ್ಲದಷ್ಟು ಬಡವರು, ಮಹಿಳೆಯರು ಹಾಗೂ ಅಂಗವಿಕಲರಿಗೆ ಸಹಾಯಹಸ್ತ ಚಾಚಿದ್ದು, ಸಮಾಜಮುಖಿ ಸೇವೆಯ ಮೂಲಕ ತುಳುನಾಡಿನ ಬೆಳಕಾಗಿ ಹೊರಹೊಮ್ಮಿದ್ದಾರೆ.

ಜಾತಿ, ಧರ್ಮ, ಭಾಷೆಯ ಭೇದವಿಲ್ಲದೆ ಎಲ್ಲರನ್ನು ಸಮಾನವಾಗಿ ಕಾಣುವ ಗುಣವನ್ನು ಹೊಂದಿರುವ ಅವರು, ಯಾರಿಗಾದರೂ ಅನ್ಯಾಯವಾದರೆ ಅದರ ವಿರುದ್ಧ ಧ್ವನಿ ಎತ್ತಿ ಜನಪರ ನ್ಯಾಯಕ್ಕಾಗಿ ಹೋರಾಡುವ ಜನನಾಯಕಿಯಾಗಿ ಗುರುತಿಸಿಕೊಂಡಿದ್ದಾರೆ.

ರಾಜಕೀಯ ಕ್ಷೇತ್ರದಲ್ಲಿ ಸುಮಾರು 17 ವರ್ಷಗಳಿಂದ ಸಕ್ರಿಯವಾಗಿ ಸೇವೆ ಸಲ್ಲಿಸುತ್ತಿರುವ ಶೈಲಜಾ ರಾಜೇಶ್ ಅವರು ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲಾ ಜವಾಹರ್ ಬಾಲ್ ಮಂಚ್ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸುತ್ತಿದ್ದು, ವಿವಿಧ ಸಂಘಟನಾ ಕಾರ್ಯಕ್ರಮಗಳ ಮೂಲಕ ಪಕ್ಷವನ್ನು ಬಲಪಡಿಸಿ, ಜಿಲ್ಲೆಯ ಹೆಸರನ್ನು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಪ್ರೀತಿ, ತಾಳ್ಮೆ ಹಾಗೂ ಸಂಘಟನಾ ಚಾತುರ್ಯದಿಂದ ಎಲ್ಲರನ್ನು ಒಗ್ಗೂಡಿಸುವ ಸಾಮರ್ಥ್ಯ ಹೊಂದಿರುವ ಶೈಲಜಾ ರಾಜೇಶ್ ಅವರು ಜನಸಾಮಾನ್ಯರೊಂದಿಗೆ ಬೆರೆತು ಬದುಕುವ ನಾಯಕಿಯಾಗಿ ಕಾರ್ಯಕರ್ತರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಪಕ್ಷ ನಿಷ್ಠೆ, ಸಮಾಜ ಸೇವೆ ಹಾಗೂ ಸಂಘಟನಾ ಸಾಮರ್ಥ್ಯದಿಂದ ಅವರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸಮರ್ಥ ಅಭ್ಯರ್ಥಿ ಎಂಬ ಅಭಿಪ್ರಾಯ ಕಾರ್ಯಕರ್ತರಲ್ಲಿ ವ್ಯಕ್ತವಾಗಿದೆ.

ಅವರ ಸಮಾಜಸೇವೆಯನ್ನು ಗುರುತಿಸಿ ಕರ್ನಾಟಕ ಸರ್ಕಾರದ ಪ್ರತಿಷ್ಠಿತ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಜೊತೆಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಪ್ರಶಸ್ತಿಗಳು ಅವರಿಗೆ ಲಭಿಸಿವೆ.

ಕಿರಿಯ ವಯಸ್ಸಿನಲ್ಲಿಯೇ ಹಲವು ಜವಾಬ್ದಾರಿಗಳನ್ನು ಹೊತ್ತು ಯಶಸ್ವಿಯಾಗಿ ನಿರ್ವಹಿಸಿರುವ ಅವರು, ಅನೇಕ ಸಂಘ-ಸಂಸ್ಥೆಗಳ ಅಧ್ಯಕ್ಷೆಯಾಗಿ ಅಪಾರ ಅನುಭವ ಗಳಿಸಿದ್ದು, ಮಹಿಳೆಯರು, ದೀನದಲಿತರು ಹಾಗೂ ಶೋಷಿತರ ಪರ ಧ್ವನಿಯಾಗಿ ನಿರಂತರ ಸೇವೆ ಸಲ್ಲಿಸುತ್ತಿದ್ದಾರೆ.

ಈ ಎಲ್ಲ ಹಿನ್ನೆಲೆಯೊಂದಿಗೆ, ಶ್ರೀಮತಿ ಶೈಲಜಾ ರಾಜೇಶ್ ಅವರನ್ನು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷೆಯಾಗಿ ನೇಮಕ ಮಾಡಬೇಕು ಎಂದು ಕಾಂಗ್ರೆಸ್ ಕಾರ್ಯಕರ್ತರು ಪಕ್ಷದ ಹೈಕಮಾಂಡ್ಗೆ ಆಗ್ರಹಿಸುತ್ತಿದ್ದಾರೆ.


