Breaking
29 Jul 2026, Wed

ಲಾವಣ್ಯ ಹತ್ಯೆ ಪ್ರಕರಣ: ಆರೋಪಿಗೆ 4 ದಿನ ಪೊಲೀಸ್ ಕಸ್ಟಡಿ

ಬಂಟ್ವಾಳ: ಬಿ.ಸಿ.ರೋಡ್ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಜುಲೈ 16ರಂದು ನಡೆದ ಲಾವಣ್ಯ (21) ಹತ್ಯೆ ಪ್ರಕರಣದ ಆರೋಪಿ ಚೇತನ್ (22)ನನ್ನು ಮಂಗಳವಾರ ಬಂಟ್ವಾಳ ನಗರ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ನಾಲ್ಕು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.


ಹತ್ಯೆಯ ಬಳಿಕ ಪರಾರಿಯಾಗಿದ್ದ ಆರೋಪಿ ವಿಷಕಾರಿ ಪದಾರ್ಥ ಸೇವಿಸಿದ್ದ ಹಿನ್ನೆಲೆಯಲ್ಲಿ ಮೊದಲು ಬಂಟ್ವಾಳ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ. ಬಳಿಕ ವೈದ್ಯರ ಸಲಹೆಯಂತೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರಂಭದಲ್ಲಿ ಐಸಿಯುನಲ್ಲಿ ಚಿಕಿತ್ಸೆ ನೀಡಿ ನಂತರ ಸಾಮಾನ್ಯ ವಾರ್ಡ್ ಗೆ ಸ್ಥಳಾಂತರಿಸಲಾಗಿತ್ತು.

ಕಳೆದ 11 ದಿನಗಳಿಂದ ಚಿಕಿತ್ಸೆ ಪಡೆದಿದ್ದ ಆರೋಪಿಯ ಆರೋಗ್ಯ ಸ್ಥಿರಗೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಯಿಂದ ಬಿಡುಗಡೆ ಮಾಡಿ ಸೋಮವಾರ ಬಂಟ್ವಾಳ ನಗರ ಪೊಲೀಸರ ವಶಕ್ಕೆ ಒಪ್ಪಿಸಲಾಗಿತ್ತು.


ಜುಲೈ 16ರಂದು ಬಸ್ ನಿಲ್ದಾಣದಲ್ಲಿ ಉಳಿ ಗ್ರಾಮದ ಕಕ್ಯಪದವು ನಿವಾಸಿ ಲಾವಣ್ಯ ಅವರ ಮೇಲೆ ಬೆಳ್ತಂಗಡಿ ತಾಲೂಕಿನ ಓಡಿಲ್ನಾಳ ನಿವಾಸಿ ಚೇತನ್ ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಹತ್ಯೆಗೈದು, ಬಳಿಕ ಕಾರಿನಲ್ಲಿ ಪರಾರಿಯಾಗಿದ್ದ. ಘಟನೆಯ ಮರುದಿನ ಮಂಗಳೂರು ನಗರದ ಪಚ್ಚನಾಡಿ ಪ್ರದೇಶದಲ್ಲಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದರು.


ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯ ಉದ್ದೇಶ, ಘಟನೆಯ ಹಿನ್ನೆಲೆ ಹಾಗೂ ಇತರೆ ಅಂಶಗಳ ಕುರಿತು ತನಿಖೆ ಮುಂದುವರಿದಿದ್ದು, ಸಾಕ್ಷ್ಯಾಧಾರಗಳ ಸಂಗ್ರಹ, ತಾಂತ್ರಿಕ ಮಾಹಿತಿ ಪರಿಶೀಲನೆ ಸೇರಿದಂತೆ ಕಾನೂನುಬದ್ಧ ತನಿಖಾ ಕ್ರಮಗಳು ಮುಂದುವರಿದಿವೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *