Breaking
19 Sep 2026, Sat

12 ವರ್ಷ ಹಳೆಯ ಮೀನುಗಾರ ಮುಖಂಡ ಗಂಗಾಧರ ಪಾಂಗಳ ಕೊಲೆ ಪ್ರಕರಣ: ನಾಲ್ವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ

ಮಂಗಳೂರು: ಮಂಗಳೂರು ನಗರದ ಹೊರವಲಯದ ಬೈಕಂಪಾಡಿಯ ಮೀನಕಳಿಯ ಬಳಿ 12 ವರ್ಷಗಳ ಹಿಂದೆ ನಡೆದಿದ್ದ ಮೀನುಗಾರ ಮುಖಂಡ ಗಂಗಾಧರ ಪಾಂಗಳ (55) ಅವರ ಕೊಲೆ ಪ್ರಕರಣದಲ್ಲಿ ನಾಲ್ವರು ಆರೋಪಿಗಳಿಗೆ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.


ಜೀವಾವಧಿ ಶಿಕ್ಷೆಗೆ ಗುರಿಯಾದವರು ಸತೀಶ್ ಬೈಕಂಪಾಡಿ (58), ಹರೀಶ್ ಬೈಕಂಪಾಡಿ (60), ಭಾಸ್ಕರ್ ಬೈಕಂಪಾಡಿ (61) ಹಾಗೂ ಪುಷ್ಪರಾಜ್ (47).
ಪ್ರಕರಣದ ವಿವರದಂತೆ, ಗಂಗಾಧರ ಪಾಂಗಳ ಅವರು ಮೊಗವೀರ ಮಹಾಸಭೆಯ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದು, ಬೈಕಂಪಾಡಿ ಮೊಗವೀರ ಮಹಾಸಭೆ ಹಾಗೂ ಗೋಪಾಲಕೃಷ್ಣ ಭಜನಾ ಮಂದಿರದ ಪುನರ್ನಿರ್ಮಾಣ ಮತ್ತು ಶಾಲಾ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ ವಂತಿಗೆ ಹಣದ ದುರುಪಯೋಗದ ಆರೋಪಗಳನ್ನು ಪ್ರಶ್ನಿಸಿದ್ದರು. ಇದರಿಂದ ಆರೋಪಿಗಳು ಅವರ ವಿರುದ್ಧ ದ್ವೇಷ ಬೆಳೆಸಿ ಕೊಲೆ ಸಂಚು ರೂಪಿಸಿದ್ದರು ಎನ್ನಲಾಗಿದೆ.


2014ರ ಮೇ 14ರಂದು ಗಂಗಾಧರ ಪಾಂಗಳ ಅವರು ಎರ್ಮಾಳಿನ ಮೂಳೂರಿನಲ್ಲಿ ತಂಬಿಲ ಕಾರ್ಯಕ್ರಮ ಮುಗಿಸಿ ರಾತ್ರಿ ಮನೆಗೆ ವಾಪಸಾಗುತ್ತಿದ್ದ ವೇಳೆ ಆರೋಪಿಗಳು ಬೊಲೆರೋ ವಾಹನದಲ್ಲಿ ಹಿಂಬಾಲಿಸಿದ್ದರು. ಬಳಿಕ ಬೈಕಂಪಾಡಿ-ಮೀನಕಳಿಯ ರಸ್ತೆಯ ಗೋದಾಮಿನ ಎದುರು ಅವರ ಸ್ಕೂಟರ್ಗೆ ಹಿಂಬದಿಯಿಂದ ಉದ್ದೇಶಪೂರ್ವಕವಾಗಿ ವಾಹನ ಡಿಕ್ಕಿ ಹೊಡೆಸಿ ಸ್ಥಳದಿಂದ ಪರಾರಿಯಾಗಿದ್ದರು. ಈ ಘಟನೆಯಲ್ಲಿ ಗಂಗಾಧರ ಪಾಂಗಳ ಮೃತಪಟ್ಟಿದ್ದರು.


ಆರಂಭದಲ್ಲಿ ಪ್ರಕರಣವನ್ನು ರಸ್ತೆ ಅಪಘಾತವೆಂದು ದಾಖಲಿಸಲಾಗಿತ್ತು. ಆದರೆ ನಂತರದ ತನಿಖೆಯಲ್ಲಿ ಇದು ಪೂರ್ವನಿಯೋಜಿತ ಕೊಲೆ ಎಂಬುದು ಬೆಳಕಿಗೆ ಬಂದಿದ್ದು, ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.


ಅಂದಿನ ಪೊಲೀಸ್ ನಿರೀಕ್ಷಕ ಎನ್.ಆರ್. ಮುಕ್ರಿ ಪ್ರಾಥಮಿಕ ತನಿಖೆ ನಡೆಸಿದ ಬಳಿಕ ತನಿಖಾಧಿಕಾರಿಗಳಾದ ರವೀಶ್ ನಾಯಕ್ ಮತ್ತು ಭಾಸ್ಕರ ರೈ ತನಿಖೆ ಮುಂದುವರಿಸಿದ್ದರು. ನಂತರ ಲೋಕೇಶ್ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.


ಪ್ರಕರಣದ ವಿಚಾರಣೆ ಪೂರ್ಣಗೊಳಿಸಿದ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಜಗದೀಶ್ ವಿ.ಎನ್. ಅವರು ಜುಲೈ 21ರಂದು ಆರೋಪಿಗಳನ್ನು ತಪ್ಪಿತಸ್ಥರೆಂದು ಘೋಷಿಸಿ, ಜುಲೈ 27ರಂದು ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕಿ ಜ್ಯೋತಿ ಪ್ರಮೋದ್ ನಾಯಕ್ ವಾದ ಮಂಡಿಸಿದ್ದರು.

Leave a Reply

Your email address will not be published. Required fields are marked *