ವಿಟ್ಲ: ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದ ಕೋಲ್ಪೆ ಕೊಡಂಗೆ ಪ್ರದೇಶದಲ್ಲಿ ತಡರಾತ್ರಿ ನಡೆದ ಕಳ್ಳತನ ಪ್ರಕರಣದಲ್ಲಿ ದುಷ್ಕರ್ಮಿಗಳು ನಿವೃತ್ತ ವೈದ್ಯರೊಬ್ಬರ ಮನೆಗೆ ನುಗ್ಗಿ ಚಿನ್ನದ ಸರವನ್ನು ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ.

ಇಡ್ಕಿದು ಗ್ರಾಮದ ಕೋಲ್ಪೆ ಕೊಡಂಗೆ ನಿವಾಸಿ ನಿವೃತ್ತ ವೈದ್ಯ ಡಾ. ಪುಂಡಿಕಾಯಿ ಸೂರ್ಯನಾರಾಯಣ ಭಟ್ (79) ಅವರ ಮನೆಯಲ್ಲಿ ಈ ಕೃತ್ಯ ನಡೆದಿದೆ. ಮನೆಯ ಹಿಂಬಾಗಿಲಿನ ಮೂಲಕ ಒಳನುಗ್ಗಿದ ಕಳ್ಳರು, ರಾತ್ರಿ ವೇಳೆ ಮಲಗಿದ್ದ ವೈದ್ಯರ ಕುತ್ತಿಗೆಯಲ್ಲಿದ್ದ ಸುಮಾರು 20 ಗ್ರಾಂ ತೂಕದ ಚಿನ್ನದ ಸರವನ್ನು ಕಸಿದುಕೊಂಡು ಪರಾರಿಯಾಗಿದ್ದಾರೆ. ಕಳವಾದ ಚಿನ್ನದ ಸರದ ಮೌಲ್ಯ ಸುಮಾರು ₹2.60 ಲಕ್ಷ ಎಂದು ಅಂದಾಜಿಸಲಾಗಿದೆ.

ತಡರಾತ್ರಿ ಮನೆಯೊಳಗೆ ಅಪರಿಚಿತರು ಪ್ರವೇಶಿಸಿರುವುದು ಗಮನಕ್ಕೆ ಬಂದ ಬಳಿಕ ಡಾ. ಸೂರ್ಯನಾರಾಯಣ ಭಟ್ ಅವರು ಎದ್ದು ನೋಡಿದಾಗ, ಇಬ್ಬರು ವ್ಯಕ್ತಿಗಳು ಚಿನ್ನದ ಸರವನ್ನು ಕಸಿದುಕೊಂಡು ಮನೆಯ ಹಿಂಬಾಗಿಲಿನ ಮೂಲಕ ಪರಾರಿಯಾಗಿರುವುದು ತಿಳಿದುಬಂದಿದೆ.

ಇದೇ ವೇಳೆ, ಘಟನೆ ನಡೆದ ಸ್ಥಳದಿಂದ ಸುಮಾರು ಅರ್ಧ ಕಿಲೋಮೀಟರ್ ದೂರದಲ್ಲಿರುವ ಕೋಲ್ಪೆ ಕೊಡಂಚರಪಾಲು ನಿವಾಸಿ ಆನಂದ ಸಫಲ್ಯ ಅವರ ಮನೆಯ ಅಂಗಳದಲ್ಲಿ ನಿಲ್ಲಿಸಲಾಗಿದ್ದ ಆ್ಯಕ್ಟಿವಾ ಸ್ಕೂಟರ್ ಅನ್ನು ಕೂಡ ಕಳ್ಳರು ಕದ್ದೊಯ್ದಿದ್ದಾರೆ.
ಇದಲ್ಲದೆ, ಸಮೀಪದ ಮತ್ತೊಂದು ಮನೆಯ ಅಂಗಳದಲ್ಲಿದ್ದ ಬೈಕ್ನ ಲಾಕ್ ಮುರಿದು ಕಳ್ಳತನಕ್ಕೆ ಯತ್ನಿಸಿದ್ದು, ಅದು ವಿಫಲವಾದ ಬಳಿಕ ಸ್ಥಳದಿಂದ ಪರಾರಿಯಾಗಿದ್ದಾರೆ.

ಘಟನೆಯ ಮಾಹಿತಿ ದೊರೆಯುತ್ತಿದ್ದಂತೆ ವಿಟ್ಲ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶ್ವಾನದಳ ಹಾಗೂ ಬೆರಳಚ್ಚು ತಜ್ಞರ ತಂಡ ಸ್ಥಳಕ್ಕೆ ಆಗಮಿಸಿ ಅಗತ್ಯ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದೆ.
ಘಟನಾ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲ್ ಕುಮಾರ್ ಎಸ್. ಭೂಮರೆಡ್ಡಿ, ಎ.ಎಸ್.ಪಿ ಯಶ್ ಕುಮಾರ್ ಶರ್ಮ ಹಾಗೂ ವಿಟ್ಲ ಠಾಣಾ ಇನ್ಸ್ಪೆಕ್ಟರ್ ಪ್ರಕಾಶ್ ದೇವಾಡಿಗ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ.

ಈ ಕುರಿತು ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.
ಇನ್ನು ಆನಂದ ಸಫಲ್ಯ ಅವರ ಮನೆಯಂಗಳದಿಂದ ಕಳವಾಗಿದ್ದ ದ್ವಿಚಕ್ರ ವಾಹನವು ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್ ಸೇತುವೆ ಸಮೀಪ ಪತ್ತೆಯಾಗಿದ್ದು, ವಿಟ್ಲ ಠಾಣಾ ಪೊಲೀಸರು ವಾಹನವನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.


