Breaking
22 Jul 2026, Wed

ಬಿ.ಸಿ.ರೋಡ್ ಲಾವಣ್ಯ ಕೊಲೆ ಪ್ರಕರಣ: ಆರೋಪಿ ಚೇತನ್ಗೆ ಕಠಿಣ ಶಿಕ್ಷೆಗೆ ಆಗ್ರಹಿಸಿ ಎಎಸ್ಪಿಗೆ ಮನವಿ

ಬಂಟ್ವಾಳ: ಬಿ.ಸಿ.ರೋಡ್ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಜುಲೈ 16ರಂದು ನಡೆದ ಕುಮಾರಿ ಲಾವಣ್ಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಸಮಗ್ರ ಹಾಗೂ ಶೀಘ್ರ ತನಿಖೆ ನಡೆಸಿ ಆರೋಪಿ ಚೇತನ್ ಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಡಾ. ಬಿ.ಆರ್. ಅಂಬೇಡ್ಕರ್ ಯುವಕ ಸಂಘ, ಕಕ್ಕೆಪದವು ವತಿಯಿಂದ ಬಂಟ್ವಾಳ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕರಿಗೆ ಮನವಿ ಸಲ್ಲಿಸಲಾಯಿತು.


ಮನವಿಯಲ್ಲಿ, ಉಳಿಗ್ರಾಮದ ನಿವಾಸಿಯಾಗಿದ್ದ ಕುಮಾರಿ ಲಾವಣ್ಯ ಅವರ ಹತ್ಯೆ ಇಡೀ ಸಮಾಜವನ್ನು ಬೆಚ್ಚಿಬೀಳಿಸಿದ ಘಟನೆ ಎಂದು ಉಲ್ಲೇಖಿಸಲಾಗಿದೆ.

ಜೀವನೋಪಾಯಕ್ಕಾಗಿ ಕೆಲಸ ಹುಡುಕಿಕೊಂಡು ಬರುವ ಮಹಿಳೆಯರ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಈ ಘಟನೆ ಎಬ್ಬಿಸಿದ್ದು, ಪ್ರಕರಣದ ತನಿಖೆಯನ್ನು ಯಾವುದೇ ಲೋಪವಿಲ್ಲದೆ ಎಲ್ಲಾ ಸಾಕ್ಷ್ಯಾಧಾರಗಳ ಆಧಾರದಲ್ಲಿ ನಡೆಸಿ ಆರೋಪಿಗೆ ಕಾನೂನು ಪ್ರಕಾರ ಕಠಿಣ ಶಿಕ್ಷೆ ದೊರಕಿಸಬೇಕು ಎಂದು ಒತ್ತಾಯಿಸಲಾಗಿದೆ.


ಅಲ್ಲದೆ, ಪ್ರಕರಣದಲ್ಲಿ ವಿಳಂಬವಾಗದೆ ನ್ಯಾಯ ದೊರಕಿಸಿಕೊಡುವ ಮೂಲಕ ಪೊಲೀಸ್ ಇಲಾಖೆ ಹಾಗೂ ಕಾನೂನಿನ ಮೇಲಿನ ಸಾರ್ವಜನಿಕರ ವಿಶ್ವಾಸವನ್ನು ಉಳಿಸಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ.


ಮನವಿಯಲ್ಲಿ ಬಿ.ಸಿ.ರೋಡ್ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಸಮರ್ಪಕ ಸಿಸಿಟಿವಿ ಕ್ಯಾಮೆರಾಗಳು, ಭದ್ರತಾ ಸಿಬ್ಬಂದಿ ಹಾಗೂ ಇತರೆ ಸುರಕ್ಷತಾ ವ್ಯವಸ್ಥೆಗಳ ಕೊರತೆ ಇರುವುದನ್ನು ಉಲ್ಲೇಖಿಸಿ, ಇಂತಹ ಸಮಾಜಘಾತುಕ ಘಟನೆಗಳು ಮರುಕಳಿಸದಂತೆ ತಕ್ಷಣವೇ ಅಗತ್ಯ ಭದ್ರತಾ ಕ್ರಮಗಳನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಲಾಗಿದೆ.


ಈ ಸಂದರ್ಭದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಯುವಕ ಸಂಘದ ಅಧ್ಯಕ್ಷ ರಾಜೀವ್ ಕಕ್ಕೆಪದವು, ಗೌರವಾಧ್ಯಕ್ಷ ಅನ್ನು ಖಂಡಿಗ, ಉಪಾಧ್ಯಕ್ಷ ಅಣ್ಣಿ ಕುರುವರ ಗೋಳಿ ಸಂಪತ್ ಮಾಡೋಡಿ, ಕಾರ್ಯದರ್ಶಿ ಜನಾರ್ಧನ ಹಾಗೂ ಪ್ರಮುಖರಾದ ಡಾ. ರುಕ್ಮಯ ಮಾಡೋಡಿ, ಶಂಕರ್ ಕೇರ್ಯ, ಸತೀಶ ಕಕ್ಕೆಪದವು, ಗೋಪಾಲ, ಪ್ರಸಾದ್, ಕಿನ್ನಿಗ, ರವಿ ಖಂಡಿಗ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *