ಉಡುಪಿ: ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಹಂಗಾರ ಕಟ್ಟೆಯ ಬಾಳೆಕುದ್ರು ಮಠದ ಪ್ರಸ್ತುತ ಪೀಠಾಧಿಪತಿಗಳಾಗಿರುವ ಪರಮಪೂಜ್ಯ ಶ್ರೀ ಶ್ರೀ ನೃಸಿಂಹಾಶ್ರಮ ಮಹಾಸ್ವಾಮಿಗಳವರು ಲಕ್ಷ್ಮೀನರಸಿಂಹ ದೇವರ ಪ್ರೇರಣೆಯಂತೆ,25/11/2024 ನೇ ಸೋಮವಾರ ಉತ್ತರಾಧಿಕಾರೀ ಶಿಷ್ಯರನ್ನಾಗಿ ಶ್ರೀ ಶ್ರೀ ಶ್ರೀ ವಾಸುದೇವ ಸದಾಶಿವಾಶ್ರಮ ಸ್ವಾಮಿಗಳು ಸ್ವೀಕರಿಸಿರುತ್ತಾರೆ.

ಶ್ರೀ ಶ್ರೀ ಶ್ರೀ ವಾಸುದೇವ ಸದಾಶಿವಾಶ್ರಮ ಸ್ವಾಮಿಯವರು ಮೂಲತ ಪೂರ್ವ ಆಶ್ರಮದಲ್ಲಿ ಬಂಟ್ವಾಳ ತಾಲೂಕು ಎಲಿಯನಡುಗೂಡು ಗ್ರಾಮದ ಬಾಳ್ತ ಬೈಲು ಸಮೀಪದ ಹೊಕ್ಕಾಡಿಗೋಳಿಯ ಬಳಂಜ ನರಸಿಂಹ ಭಟ್ರವರ ಮೊಮ್ಮಗ, ಸುಂದರ ಭಟ್, ಸರಸ್ವತಿ ಭಟ್ ರವರ ದ್ವಿತೀಯ ಪುತ್ರ ಆಗಿರುತ್ತಾರೆ.

ನಮ್ಮ ಬಾಳೆಕುದ್ರು ಶ್ರೀಮಠವು ಭಾಗವತ – ಅದೈತ ಸಂಪ್ರದಾಯಕ್ಕೆ ಸೇರಿದ್ದು, ಸಾವಿರಾರು ವರ್ಷಗಳ ಭವ್ಯವಾದ ಇತಿಹಾಸ ಮತ್ತು ಶ್ರೇಷ್ಠವಾದ ಗುರು ಪರಂಪರೆಯನ್ನು ಹೊಂದಿರುತ್ತದೆ. ಮಹಾನ್ ತಪಸ್ವಿಗಳಾದ ಮಹರ್ಷಿ ವರದಮುನಿಗಳಿಂದ ಆರಂಭವಾಗಿರುವ ರಾಜಮಾನ್ಯವಾದ ಈ ಸ್ವತಂತ್ರ ಮಠವು ಅಂದಿನಿಂದಲೂ ದೇಶ, ಕಾಲ, ಪರಿಸ್ಥಿತಿಗೆ ತಕ್ಕಂತೆ ಆಧ್ಯಾತ್ಮಿಕವಾಗಿ, ಧಾರ್ಮಿಕವಾಗಿ, ಸಾಂಸ್ಕೃತಿಕವಾಗಿ ಸಮಸ್ತ ಸಮಾಜಕ್ಕೆ ನಿರಂತರವಾಗಿ ಮಾರ್ಗದರ್ಶನವನ್ನು ಮಾಡುತ್ತಾ ಎಲ್ಲರ ಗೌರವ-ಆದರಕ್ಕೆ ಪಾತ್ರವಾಗಿರುತ್ತದೆ.


