Breaking
25 Jun 2026, Thu

ಯುವವಾಹಿನಿ ಮಾಣಿ ಘಟಕದಿಂದ ವೃಕ್ಷೋತ್ಸವ ಹಾಗೂ ಶಾಲೆಗೆ ಶೀಟ್ ಮುಚ್ಚಿಗೆ ಸಮರ್ಪಣೆ

ಕಲ್ಲಡ್ಕ: ಯುವವಾಹಿನಿ ಮಾಣಿ ಘಟಕದ ವತಿಯಿಂದ ಮಜಿ ವೀರಕಂಭ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖಮಂಟಪಕ್ಕೆ ಶೀಟ್ ಮುಚ್ಚಿಗೆ ಸಮರ್ಪಣೆ ಹಾಗೂ “ಯುವ ವೃಕ್ಷೋತ್ಸವ” ಕಾರ್ಯಕ್ರಮ ಜೂನ್ 25ರಂದು ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ಪಡ್ಪು, ಪರಿಸರದ ಸಮತೋಲನ ಕಾಪಾಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದು ಹೇಳಿದರು.

ಪರಿಸರವು ಮಾನವನ ಜೀವನದ ಅವಿಭಾಜ್ಯ ಅಂಗವಾಗಿದ್ದು, ಗಾಳಿ, ನೀರು, ಮಣ್ಣು, ಸಸ್ಯಗಳು ಮತ್ತು ಪ್ರಾಣಿಗಳು ಸೇರಿ ಪರಿಸರವನ್ನು ರೂಪಿಸುತ್ತವೆ. ಜೀವಿಗಳ ಅಸ್ತಿತ್ವಕ್ಕೆ ಅಗತ್ಯವಾದ ಸಂಪನ್ಮೂಲಗಳನ್ನು ಪರಿಸರ ಒದಗಿಸುತ್ತಿದ್ದು, ಶುದ್ಧ ಗಾಳಿ, ಕುಡಿಯುವ ನೀರು ಹಾಗೂ ಆಹಾರ ಉತ್ಪಾದನೆಗೆ ಆರೋಗ್ಯಕರ ಪರಿಸರ ಅತ್ಯಗತ್ಯವಾಗಿದೆ ಎಂದರು.

ಹೆಚ್ಚು ಮರಗಳನ್ನು ನೆಟ್ಟು ಅವುಗಳನ್ನು ಪೋಷಿಸುವುದು, ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವುದು, ನೀರು ಮತ್ತು ವಿದ್ಯುತ್‌ನ್ನು ಮಿತವಾಗಿ ಬಳಸುವುದು ಹಾಗೂ ತ್ಯಾಜ್ಯ ವಸ್ತುಗಳನ್ನು ಸರಿಯಾಗಿ ವಿಲೇವಾರಿ ಮಾಡುವಂತಹ ಕ್ರಮಗಳಿಂದ ಪರಿಸರ ಸಂರಕ್ಷಣೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಯುವವಾಹಿನಿಯ ಖಜಾಂಚಿ ಹಾಗೂ ಜಿಲ್ಲಾ ಪ್ರಶಸ್ತಿ ವಿಜೇತ ಶಿಕ್ಷಕಿ ಡಾ. ತ್ರಿವೇಣಿ ರಮೇಶ್ ಮಾತನಾಡಿ, ಪರಿಸರ ದಿನಾಚರಣೆ ಕೇವಲ ಒಂದು ದಿನಕ್ಕೆ ಸೀಮಿತವಾಗದೆ, ನೆಟ್ಟ ಗಿಡಗಳ ಪೋಷಣೆಯ ಜವಾಬ್ದಾರಿಯನ್ನು ಹೊತ್ತುಕೊಂಡು ನಿರಂತರ ಕಾಳಜಿ ವಹಿಸಬೇಕು ಎಂದರು. ವಿದ್ಯಾರ್ಥಿಗಳಲ್ಲಿ ಪರಿಸರ ಪ್ರಜ್ಞೆ, ಸ್ವಚ್ಛತಾ ಜಾಗೃತಿ ಹಾಗೂ ಸೇವಾ ಮನೋಭಾವ ಬೆಳೆಸುವ ಅಗತ್ಯವಿದೆ ಎಂದು ಹೇಳಿದರು.

ಶಾಲೆಯ ಬೇಡಿಕೆಯಂತೆ ಮುಖಮಂಟಪಕ್ಕೆ ಶೀಟ್ ಮುಚ್ಚಿಗೆಯನ್ನು ಒದಗಿಸಿದ ಯುವವಾಹಿನಿ ಮಾಣಿ ಘಟಕದ ಅಧ್ಯಕ್ಷ ಗಣೇಶ್ ಶೀ ಸಾಯೀ ಅವರನ್ನು ಶಾಲಾ ವತಿಯಿಂದ ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಯುವವಾಹಿನಿ ಮಾಣಿ ಘಟಕದ ಉಪಾಧ್ಯಕ್ಷ ಸುಜಿತ್ ಅಂಚನ್, ಸದಸ್ಯರಾದ ಪ್ರತ್ವೀಕ್, ರೇಣುಕಾ ಕಣಿಯೂರು, ವೀರಕಂಭ ಪಂಚಾಯತ್ ನಿಕಟಪೂರ್ವ ಉಪಾಧ್ಯಕ್ಷ ಜನಾರ್ಧನ ಪೂಜಾರಿ ಗೋಳಿಮಾರು, ಪ್ರಗತಿಪರ ಕೃಷಿಕ ಜಯಪ್ರಕಾಶ್ ತೆಕ್ಕಿಪಾಪು ಹಾಗೂ ವಿದ್ಯಾರ್ಥಿ ನಾಯಕ ಮೊಹಮ್ಮದ್ ಹಾರೂನ್ ಫರ್ಹಾನ್ ಉಪಸ್ಥಿತರಿದ್ದರು.

ಮುಖ್ಯ ಶಿಕ್ಷಕಿ ಬೆನಡಿಕ್ಟಾ ಆಗ್ನೇಸ್ ಮಂಡೋನ್ಸ ಸ್ವಾಗತಿಸಿದರು. ಶಿಕ್ಷಕ ತೌಸೀಫ್ ಅಹ್ಮದ್ ವಂದಿಸಿದರು. ಹಿರಿಯ ಶಿಕ್ಷಕಿ ಸಂಗೀತ ಶರ್ಮಾ ಪಿ.ಜಿ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *