ಬಂಟ್ವಾಳ: ಕಾರು ಮತ್ತು ಸ್ಕೂಟರ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸ್ಕೂಟರ್ ಸವಾರ ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ಮುಡಿಪು–ಬಿ.ಸಿ.ರೋಡ್ ರಸ್ತೆಯ ಸಜಿಪನಡು ಪ್ರದೇಶದಲ್ಲಿ ನಡೆದಿದೆ. ಮೃತರನ್ನು ಸಜಿಪನಡು ನಿವಾಸಿ ಅಬ್ದುಲ್ ರಹಿಮಾನ್ ಅವರ ಪುತ್ರ ಅಹಮದ್ ಆಸೀರ್ (22) ಎಂದು ಗುರುತಿಸಲಾಗಿದೆ.

ಮಾಹಿತಿಯ ಪ್ರಕಾರ, ಅಹಮದ್ ಆಸೀರ್ ಅವರು ಜೂನ್ 18ರ ಸಂಜೆ ತಮ್ಮ ಮನೆಯಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿರುವ ಸಜಿಪ ಬೇಂಕೆ ಪ್ರದೇಶಕ್ಕೆ ಸ್ಕೂಟರ್‌ನಲ್ಲಿ ತೆರಳುತ್ತಿದ್ದ ವೇಳೆ ಎದುರಿನಿಂದ ಬಂದ ಕಾರು ಡಿಕ್ಕಿ ಹೊಡೆದಿದೆ. ಅಪಘಾತದ ಪರಿಣಾಮ ಅವರು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಅಪಘಾತದ ತೀವ್ರತೆ ಎಷ್ಟಿತ್ತೆಂದರೆ, ಸ್ಕೂಟರ್ ಸಂಪೂರ್ಣ ಜಖಂಗೊಂಡಿದ್ದು ವಾಹನವನ್ನು ಗುರುತಿಸಲು ಕಷ್ಟವಾಗುವಷ್ಟು ಹಾನಿಯಾಗಿದೆ. ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.






