Breaking
19 Jun 2026, Fri

ಮಂಗಳೂರು: ಮಾದಕ ವಸ್ತು ಸೇವನೆ ಪ್ರಕರಣ; ವಿವಿಧ ಠಾಣೆಗಳ ಕಾರ್ಯಾಚರಣೆಯಲ್ಲಿ ಐವರು ಬಂಧನ

ಮಂಗಳೂರು: ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ವಿವಿಧ ಠಾಣಾ ವ್ಯಾಪ್ತಿಗಳಲ್ಲಿ ಮಾದಕ ವಸ್ತು ಸೇವನೆ ಪ್ರಕರಣಗಳಿಗೆ ಸಂಬಂಧಿಸಿ ಐದು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕದ್ರಿ ಠಾಣಾ ವ್ಯಾಪ್ತಿಯಲ್ಲಿ, ಪದವು ಗ್ರಾಮದ ಮುಗ್ರೋಡಿ ನಿವಾಸಿಯಾಗಿದ್ದು ಪ್ರಸ್ತುತ ಮೂಡುಶೆಡ್ಡೆ ಶಿವನಗರದಲ್ಲಿ ವಾಸವಿದ್ದ ಆಕಾಶ್ (30) ಎಂಬಾತನನ್ನು ಅನುಮಾನದ ಮೇರೆಗೆ ಠಾಣೆಗೆ ಕರೆಸಿ ವಿಚಾರಣೆ ನಡೆಸಲಾಯಿತು. ಬಳಿಕ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಆತ ಮಾದಕ ವಸ್ತು ಸೇವನೆ ಮಾಡಿರುವುದು ದೃಢಪಟ್ಟಿದೆ.

ಕೊಣಾಜೆ ಠಾಣಾ ವ್ಯಾಪ್ತಿಯಲ್ಲಿ, ಅಸೈಗೋಳಿ ಮೈದಾನ, ದೇರಳಕಟ್ಟೆ ಗ್ರೀನ್ ಗ್ರೌಂಡ್ ಹಾಗೂ ಮುಡಿಪು ಪ್ರದೇಶಗಳಲ್ಲಿ ನಶೆಯಲ್ಲಿದ್ದ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತರನ್ನು ಸುಮಂತ್ ಶೆಟ್ಟಿ (27), ವಿಕ್ರಮ್ (23) ಮತ್ತು ಕೆ.ಎಂ. ಬಿಲಾಲ್ (30) ಎಂದು ಗುರುತಿಸಲಾಗಿದೆ. ವೈದ್ಯಕೀಯ ಪರೀಕ್ಷೆಯಲ್ಲಿ ಮೂವರೂ ಮಾದಕ ವಸ್ತು ಸೇವಿಸಿರುವುದು ದೃಢಪಟ್ಟಿದೆ.

ಇದೇ ವೇಳೆ, ಪಣಂಬೂರು ಠಾಣಾ ವ್ಯಾಪ್ತಿಯ ಜೋಕಟ್ಟೆ ರೈಲ್ವೆ ಟ್ರ್ಯಾಕ್ ಸಮೀಪ ಮಾದಕ ವಸ್ತು ಸೇವನೆ ಮಾಡಿ ನಶೆಯಲ್ಲಿದ್ದ ಮೊಹಮ್ಮದ್ ಸಾದಿಕ್ (37) ಎಂಬಾತನನ್ನೂ ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ಆತ ಸೇವನೆ ಮಾಡಿರುವುದಾಗಿ ಒಪ್ಪಿಕೊಂಡಿದ್ದು, ವೈದ್ಯಕೀಯ ಪರೀಕ್ಷೆಯಲ್ಲೂ ಅದು ದೃಢಪಟ್ಟಿದೆ.

ಬಂಧಿತ ಐವರ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *