Breaking
19 Jun 2026, Fri

ಚಿಕ್ಕೋಡಿಯಲ್ಲಿ ಗಾರ್ಮೆಂಟ್ಸ್ ಅಂಗಡಿಗೆ ಬೆಂಕಿ: ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಭಸ್ಮ

ಚಿಕ್ಕೋಡಿ: ಪಟ್ಟಣದ ಪ್ರಮುಖ ವ್ಯಾಪಾರ ಕೇಂದ್ರವಾದ ಗುರುವಾರ ಪೇಟೆಯಲ್ಲಿರುವ ಜಯಶ್ರೀ ಗಾರ್ಮೆಂಟ್ಸ್ ಅಂಗಡಿಯಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಲಕ್ಷಾಂತರ ರೂಪಾಯಿ ಮೌಲ್ಯದ ಬಟ್ಟೆಗಳು ಹಾಗೂ ಪೀಠೋಪಕರಣಗಳು ಸುಟ್ಟು ಭಸ್ಮವಾದ ಘಟನೆ ಗುರುವಾರ ರಾತ್ರಿ ನಡೆದಿದೆ.

ರಾತ್ರಿ ಸುಮಾರು 10.30 ರಿಂದ 11.00 ಗಂಟೆಯ ಅವಧಿಯಲ್ಲಿ ಅವಘಡ ಸಂಭವಿಸಿದೆ. ಅಂಗಡಿ ಮಾಲೀಕರು ಎಂದಿನಂತೆ ವ್ಯಾಪಾರ ಮುಗಿಸಿ ಅಂಗಡಿಯನ್ನು ಬಂದ್ ಮಾಡಿ ಮನೆಗೆ ತೆರಳಿದ ಬಳಿಕ ಅಂಗಡಿಯೊಳಗಿನಿಂದ ಹೊಗೆ ಮತ್ತು ಬೆಂಕಿಯ ಜ್ವಾಲೆಗಳು ಕಾಣಿಸಿಕೊಂಡಿವೆ.

ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಸ್ಥಳೀಯರು ತಕ್ಷಣ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಆದರೆ ಅಂಗಡಿಯಲ್ಲಿದ್ದ ಹೆಚ್ಚಿನ ಪ್ರಮಾಣದ ಬಟ್ಟೆಗಳು ಮತ್ತು ಇತರೆ ವಸ್ತುಗಳು ಬೆಂಕಿಗಾಹುತಿಯಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.

ಘಟನೆಯಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅವಘಡದ ನಿಖರ ಕಾರಣ ಕುರಿತು ತನಿಖೆ ಮುಂದುವರಿದಿದೆ.

Leave a Reply

Your email address will not be published. Required fields are marked *