ದಾವಣಗೆರೆ: ಜಿಮ್‌ನಲ್ಲಿ ತಾಲೀಮು ಮುಗಿಸಿ ಮನೆಗೆ ಬಂದ ಕೆಲವೇ ಹೊತ್ತಿನಲ್ಲಿ ಕುಸಿದು ಬಿದ್ದು 26 ವರ್ಷದ ಬಾಡಿ ಬಿಲ್ಡರ್ ಮೃತಪಟ್ಟ ಘಟನೆ ನಗರದ ಕೆ.ಟಿ.ಜೆ. ನಗರದಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಮೃತರನ್ನು ಸುಶೀಲ್ ಕುಮಾರ್ (26) ಎಂದು ಗುರುತಿಸಲಾಗಿದೆ. ರಾಜ್ಯ ಹಾಗೂ ರಾಷ್ಟ್ರಮಟ್ಟದ ಬಾಡಿ ಬಿಲ್ಡಿಂಗ್ ಸ್ಪರ್ಧೆಗಳಲ್ಲಿ ಹಲವು ಪ್ರಶಸ್ತಿಗಳನ್ನು ಪಡೆದಿದ್ದ ಅವರು, ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಿಗೆ ಸಿದ್ಧತೆ ನಡೆಸುತ್ತಿದ್ದರು.

ಮನೆಗೆ ಬಂದ ತಕ್ಷಣ ಏಕಾಏಕಿ ಕುಸಿದು ಬಿದ್ದ ಸುಶೀಲ್ ಅವರನ್ನು ಕುಟುಂಬಸ್ಥರು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲು ಪ್ರಯತ್ನಿಸಿದರೂ, ದಾರಿ ಮಧ್ಯದಲ್ಲೇ ಅವರು ಮೃತಪಟ್ಟಿದ್ದಾರೆ. ಪ್ರಾಥಮಿಕ ಮಾಹಿತಿಯಂತೆ ರಕ್ತದೊತ್ತಡ ಏಕಾಏಕಿ ಕಡಿಮೆಯಾಗಿ ಹೃದಯಾಘಾತ ಸಂಭವಿಸಿರಬಹುದು ಎಂಬ ಶಂಕೆಯನ್ನು ವೈದ್ಯರು ವ್ಯಕ್ತಪಡಿಸಿದ್ದಾರೆ.

ಯುವಕರಿಗೆ ಪ್ರೇರಣೆಯಾಗಿದ್ದ ಸುಶೀಲ್ ಕುಮಾರ್, ಸಾಧನೆಯ ಕನಸು ಕಾಣುವ ಹಲವರಿಗೆ ಪ್ರತಿದಿನ ತರಬೇತಿ ನೀಡುತ್ತಿದ್ದರು. ಅವರ ಅಕಾಲಿಕ ನಿಧನದಿಂದ ಕುಟುಂಬಸ್ಥರು, ಸ್ನೇಹಿತರು ಹಾಗೂ ಶಿಷ್ಯವರ್ಗದಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿದೆ.






