ಮಂಗಳೂರು: ಕರಾವಳಿಯ ಪ್ರತಿಭೆಗಳು ಜಾಗತಿಕ ಮಟ್ಟದಲ್ಲಿ ತಮ್ಮ ಛಾಪು ಮೂಡಿಸುತ್ತಿರುವ ಸಾಲಿಗೆ ಮತ್ತೊಂದು ಹೆಮ್ಮೆಯ ಸಾಧನೆ ಸೇರ್ಪಡೆಯಾಗಿದೆ. ಮಂಗಳೂರಿನ ಉದ್ಯಮಿ ಯಶೋಧಾ ರಾಜೇಶ್ ಅವರು ಥೈಲ್ಯಾಂಡ್ನ ಹುವಾ ಹಿನ್‌ನಲ್ಲಿ ನಡೆದ ಪ್ರತಿಷ್ಠಿತ Mrs Tourism International 2026 ಸ್ಪರ್ಧೆಯಲ್ಲಿ Mrs Tourism International Talent Queen 2026 ಕಿರೀಟವನ್ನು ಗೆದ್ದು ಭಾರತಕ್ಕೆ ಕೀರ್ತಿ ತಂದಿದ್ದಾರೆ.

ಜಗತ್ತಿನ 22 ದೇಶಗಳ ಸ್ಪರ್ಧಿಗಳು ಭಾಗವಹಿಸಿದ್ದ ಈ ಅಂತರರಾಷ್ಟ್ರೀಯ ಸ್ಪರ್ಧೆಯಲ್ಲಿ ಯಶೋಧಾ ಅವರ ಪ್ರತಿಭಾ ಪ್ರದರ್ಶನ ವಿಶೇಷ ಮೆಚ್ಚುಗೆಗೆ ಪಾತ್ರವಾಯಿತು. ಟ್ಯಾಲೆಂಟ್ ಸುತ್ತಿನಲ್ಲಿ ಅವರು ಪ್ರದರ್ಶಿಸಿದ ‘ಅರ್ಧನಾರೀಶ್ವರ’ ನೃತ್ಯ ರೂಪಕವು ಭಾರತೀಯ ಸಂಸ್ಕೃತಿ, ಆಧ್ಯಾತ್ಮಿಕತೆ ಮತ್ತು ಕಲಾತ್ಮಕತೆಯ ಅದ್ಭುತ ಸಂಯೋಜನೆಯಾಗಿ ಗಮನ ಸೆಳೆಯಿತು.
ಶಿವ-ಪಾರ್ವತಿಯ ದೈವಿಕ ಏಕತೆಯನ್ನು ಮನಮೋಹಕವಾಗಿ ಅನಾವರಣಗೊಳಿಸಿದ ಈ ಪ್ರದರ್ಶನಕ್ಕೆ ಅಂತರರಾಷ್ಟ್ರೀಯ ತೀರ್ಪುಗಾರರು ಹಾಗೂ ಪ್ರೇಕ್ಷಕರು ಎದ್ದು ನಿಂತು ಗೌರವ ಸೂಚಿಸಿದರೆಂದು ತಿಳಿದುಬಂದಿದೆ.

ಯಶೋಧಾ ಅವರ ಯಶಸ್ಸಿನ ಹಿಂದೆ ಮಂಗಳೂರಿನ ಪಾತ್‌ವೇ ಮಾಡೆಲಿಂಗ್ ಸ್ಟುಡಿಯೋ ನೀಡಿದ ಆರಂಭಿಕ ತರಬೇತಿ ಹಾಗೂ ಆಸ್ಟ್ರಲ್ ಪೇಜೆಂಟ್ಸ್ ಸಂಸ್ಥೆಯ ರಾಷ್ಟ್ರೀಯ ನಿರ್ದೇಶಕಿ ಪ್ರತಿಭಾ ಸೌಂಶಿಮಠ್ ಅವರ ಮಾರ್ಗದರ್ಶನ ಪ್ರಮುಖ ಪಾತ್ರ ವಹಿಸಿದೆ. ಅಂತರರಾಷ್ಟ್ರೀಯ ಮಟ್ಟದ ಪ್ರಶ್ನೋತ್ತರ ಸುತ್ತುಗಳನ್ನು ಎದುರಿಸಲು ವಿಶೇಷ ತರಬೇತಿಯನ್ನೂ ಅವರು ಪಡೆದಿದ್ದರು.

ರಾಷ್ಟ್ರೀಯ ವೇಷಭೂಷಣ ಸುತ್ತಿನಲ್ಲಿ ಯಶೋಧಾ ಅವರು ಕರ್ನಾಟಕದ ಐತಿಹಾಸಿಕ ದೇವಾಲಯಗಳ ಶಿಲಾಬಾಲಿಕೆ ಶಿಲ್ಪಗಳಿಂದ ಪ್ರೇರಿತವಾದ ವಿಶಿಷ್ಟ ಉಡುಪಿನಲ್ಲಿ ಮಿಂಚಿದರು. ರಾಷ್ಟ್ರೀಯ ಪಕ್ಷಿ ನವಿಲು, ಕಮಲ ಹಾಗೂ ಅಶೋಕ ಸ್ತಂಭದ ನಾಲ್ಕು ಸಿಂಹಗಳನ್ನು ಒಳಗೊಂಡಿದ್ದ ಆಕರ್ಷಕ ವಿನ್ಯಾಸವು ಭಾರತೀಯ ಪರಂಪರೆ, ಸೌಂದರ್ಯ ಮತ್ತು ಏಕತೆಯ ಸಂದೇಶವನ್ನು ಜಾಗತಿಕ ವೇದಿಕೆಯಲ್ಲಿ ಅನಾವರಣಗೊಳಿಸಿತು.

ಏಳು ದಿನಗಳ ಕಾಲ ನಡೆದ ಈ ಸ್ಪರ್ಧೆಯಲ್ಲಿ ಸಾಂಸ್ಕೃತಿಕ ವಿನಿಮಯ, ಪ್ರವಾಸೋದ್ಯಮ ಪ್ರಚಾರ, ಪ್ರತಿಭಾ ಪ್ರದರ್ಶನ, ವೈಯಕ್ತಿಕ ಸಂದರ್ಶನ ಹಾಗೂ ಸಮಾಜಮುಖಿ ಚಟುವಟಿಕೆಗಳು ನಡೆದವು. ಕಳೆದ ಆರು ವರ್ಷಗಳಿಂದ ನಿರಂತರ ಪರಿಶ್ರಮ ಮತ್ತು ತರಬೇತಿಯ ಮೂಲಕ ಯಶೋಧಾ ಈ ಸಾಧನೆಗೆ ತಲುಪಿದ್ದಾರೆ.
ವೈಯಕ್ತಿಕ ಸಂದರ್ಶನದಲ್ಲಿ ತಮ್ಮ ಜೀವನ ಪಯಣ, ಗುರಿಗಳು ಹಾಗೂ ಸಮಾಜಮುಖಿ ಕಾರ್ಯಗಳ ಬಗ್ಗೆ ಆತ್ಮವಿಶ್ವಾಸದಿಂದ ಉತ್ತರಿಸಿದ ಅವರು ತೀರ್ಪುಗಾರರ ಮೆಚ್ಚುಗೆ ಗಳಿಸಿದರು. ಅಂತಿಮವಾಗಿ ಹುವಾ ಹಿನ್ನ ಮಾರ್ಕೆಟ್ ವಿಲೇಜ್‌ನಲ್ಲಿ ನಡೆದ ಗ್ರ್ಯಾಂಡ್ ಫಿನಾಲೆಯಲ್ಲಿ ‘ಟ್ಯಾಲೆಂಟ್ ಕ್ವೀನ್ 2026’ ಕಿರೀಟವನ್ನು ತಮ್ಮದಾಗಿಸಿಕೊಂಡರು.

ಈ ಹಿಂದೆ Mrs India Astral 2025 ಸ್ಪರ್ಧೆಯಲ್ಲಿ ರನ್ನರ್-ಅಪ್ ಆಗಿದ್ದ ಯಶೋಧಾ ರಾಜೇಶ್, ಇದೀಗ ಅಂತರರಾಷ್ಟ್ರೀಯ ವೇದಿಕೆಯಲ್ಲಿ ಸಾಧನೆ ಮಾಡಿ ಮಂಗಳೂರು ಹಾಗೂ ಕರ್ನಾಟಕದ ಹೆಸರನ್ನು ಮತ್ತೊಮ್ಮೆ ವಿಶ್ವಮಟ್ಟದಲ್ಲಿ ಎತ್ತಿಹಿಡಿದಿದ್ದಾರೆ. ಕುಟುಂಬ, ವೃತ್ತಿ ಮತ್ತು ಪ್ರತಿಭೆಯನ್ನು ಸಮತೋಲನದಿಂದ ಮುನ್ನಡೆಸುತ್ತಾ ಸಾಧನೆಯ ಶಿಖರ ತಲುಪಿರುವ ಅವರ ಪಯಣ ಇಂದಿನ ಮಹಿಳೆಯರಿಗೆ ಸ್ಫೂರ್ತಿದಾಯಕವಾಗಿದೆ.





