ಹೊನ್ನಾವರ: ತಾಲೂಕಿನ ದೇವಸ್ಥಾನ ಕೇರಿ ಪ್ರದೇಶದಲ್ಲಿ ನಡೆದ ಭಾರಿ ಪ್ರಮಾಣದ ಚಿನ್ನಾಭರಣ ಕಳವು ಪ್ರಕರಣವನ್ನು ಹೊನ್ನಾವರ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಮನೆಯಲ್ಲಿದ್ದ ಕಬ್ಬಿಣದ ಟ್ರಂಕ್‌ನಲ್ಲಿ ಸಂಗ್ರಹಿಸಿಟ್ಟಿದ್ದ ಸುಮಾರು 128 ಗ್ರಾಂ ಚಿನ್ನಾಭರಣ ಹಾಗೂ ನಗದು ಹಣ ಕಳ್ಳತನವಾಗಿರುವ ಕುರಿತು ದೂರು ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರರು ದೇವಸ್ಥಾನ ಕೇರಿ ನಿವಾಸಿ ಧನುಷ್ ಶ್ರೀಧರ ಗೌಡ ಎಂಬಾತನ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು.

ದೂರಿನ ಆಧಾರದ ಮೇಲೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಕಲಂ 305 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಶೇಷ ತನಿಖಾ ತಂಡವನ್ನು ರಚಿಸಿ ಕಾರ್ಯಾಚರಣೆ ಆರಂಭಿಸಿದರು. ಖಚಿತ ಮಾಹಿತಿಯ ಮೇರೆಗೆ ಪ್ರಮುಖ ಆರೋಪಿ ಧನುಷ್ ಶ್ರೀಧರ ಗೌಡ ಹಾಗೂ ಕಳವುಗೈದ ಆಭರಣಗಳನ್ನು ಮಾರಾಟ ಮಾಡಲು ಸಹಾಯ ಮಾಡಿದ ಆತನ ಸ್ನೇಹಿತ ಗೌರೀಶ ಗಣಪತಿ ಗೌಡ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಯಿತು.

ವಿಚಾರಣೆ ವೇಳೆ ಆರೋಪಿಗಳು ಕದ್ದ ಚಿನ್ನಾಭರಣಗಳನ್ನು ಮಣಪ್ಪುರಂ ಫೈನಾನ್ಸ್ ಲಿಮಿಟೆಡ್ ಹಾಗೂ ಮುತ್ತೂಟ್ ಫಿನ್‌ಕಾರ್ಪ್ ಸಂಸ್ಥೆಗಳಲ್ಲಿ ಅಡವಿಟ್ಟಿರುವುದಾಗಿ ಒಪ್ಪಿಕೊಂಡಿದ್ದಾರೆ. ಬಳಿಕ ಪೊಲೀಸರು ತ್ವರಿತ ಕಾರ್ಯಾಚರಣೆ ನಡೆಸಿ 127.5 ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಜಪ್ತಿ ಮಾಡಲಾದ ಆಭರಣಗಳ ಒಟ್ಟು ಮೌಲ್ಯ 17.08 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.
ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಅವರಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಈ ಕಾರ್ಯಾಚರಣೆ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್., ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಜಿ. ಹಾಗೂ ಭಟ್ಕಳ ಉಪವಿಭಾಗದ ಡಿವೈಎಸ್‌ಪಿ ಗಿರೀಶ ಬಿ. ಅವರ ಮಾರ್ಗದರ್ಶನದಲ್ಲಿ ನಡೆಯಿತು.
ಹೊನ್ನಾವರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಸಿದ್ದರಾಮೇಶ್ವರ ಎಸ್. ಅವರ ನೇತೃತ್ವದಲ್ಲಿ ಪಿಎಸ್‌ಐ ಮಹಾಂತೇಶ ವಾಲ್ಮೀಕಿ, ಸಂಗೀತಾ, ರೇಣುಕಾ ಹಾಗೂ ಸಿಬ್ಬಂದಿಗಳಾದ ಗಜಾನನ ನಾಯ್ಕ, ಮನೋಜ ಡಿ., ರವಿ ನಾಯ್ಕ ಮತ್ತು ಸಚಿನ್ ನಾಯ್ಕ ಅವರು ಆರೋಪಿಗಳನ್ನು ಬಂಧಿಸಿ, ಕಳುವಾದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.

ಪೊಲೀಸರ ತ್ವರಿತ ಹಾಗೂ ಪರಿಣಾಮಕಾರಿ ತನಿಖೆಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ಮರಳಿ ಪಡೆಯಲು ಸಾಧ್ಯವಾಗಿದ್ದು, ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.

