ಬೆಳ್ತಂಗಡಿ: ಕೇವಲ ಒಂಬತ್ತು ವರ್ಷಗಳ ಹಿಂದೆ ಡಾಮರೀಕರಣಗೊಂಡಿದ್ದ ನಾವೂರು ಗ್ರಾಮದ ಕೈಕಂಬ ಜಂಕ್ಷನ್‌ನಿಂದ ಫಾರೆಸ್ಟ್ ಬಂಗಲೆಗೆ ಸಂಪರ್ಕಿಸುವ ರಸ್ತೆ ಇಂದು ಸಂಪೂರ್ಣ ಹದಗೆಟ್ಟು ಜನರ ಆಕ್ರೋಶಕ್ಕೆ ಕಾರಣವಾಗಿದೆ. ರಸ್ತೆಯಲ್ಲಿ ಗುಂಡಿ ಇದೆಯೋ ಅಥವಾ ಗುಂಡಿಯಲ್ಲಿ ರಸ್ತೆ ಇದೆಯೋ ಎಂದು ಅರ್ಥವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ವಾಹನ ಸವಾರರು ಹಾಗೂ ಸಾರ್ವಜನಿಕರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ.

ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ ಬೆಳ್ತಂಗಡಿ ವತಿಯಿಂದ 2017ರಲ್ಲಿ ಸುಮಾರು 50 ಲಕ್ಷ ರೂ. ವೆಚ್ಚದಲ್ಲಿ 1.40 ಕಿ.ಮೀ. ಉದ್ದದ ಈ ರಸ್ತೆಗೆ ಡಾಮರೀಕರಣ ಮಾಡಲಾಗಿತ್ತು. ಆದರೆ ಈಗ ಸುಮಾರು 1 ಕಿ.ಮೀ. ರಸ್ತೆ ಸಂಪೂರ್ಣವಾಗಿ ಗುಂಡಿಗಳಿಂದ ತುಂಬಿಕೊಂಡಿದ್ದು, ಸಂಚಾರಕ್ಕೆ ಅಯೋಗ್ಯವಾಗಿದೆ. ಬೇಸಿಗೆಯಲ್ಲಿ ಗುಂಡಿಗಳನ್ನು ಮುಚ್ಚಲು ಮಣ್ಣು ಹಾಕಲಾಗಿದ್ದರೂ, ಮಳೆಗಾಲ ಆರಂಭವಾದ ಕೂಡಲೇ ರಸ್ತೆ ಕೆಸರುಮಯಗೊಂಡು ಕಂಬಳ ಗದ್ದೆಯನ್ನು ನಾಚಿಸುವಂತಾಗಿದೆ.

ಈ ರಸ್ತೆ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಫಾರೆಸ್ಟ್ ಬಂಗಲೆ, ಕಣಾಲು, ಕಾರಿಂಜ, ಕುಂಡಡ್ಕ, ಸುಳ್ಳೊಡಿ ಸೇರಿದಂತೆ ಹಲವು ಪ್ರದೇಶಗಳನ್ನು ಸಂಪರ್ಕಿಸುವ ಪ್ರಮುಖ ಮಾರ್ಗವಾಗಿದೆ. ನೂರಾರು ವಿದ್ಯಾರ್ಥಿಗಳು ಪ್ರತಿದಿನ ಇದೇ ರಸ್ತೆಯ ಮೂಲಕ ಶಾಲೆ ಹಾಗೂ ಕಾಲೇಜುಗಳಿಗೆ ತೆರಳಬೇಕಾದ ಅನಿವಾರ್ಯತೆ ಎದುರಿಸುತ್ತಿದ್ದಾರೆ. ಅಲ್ಲದೆ, ನೂರಾರು ಸಾರ್ವಜನಿಕರು ತಮ್ಮ ದೈನಂದಿನ ಕೆಲಸ ಕಾರ್ಯಗಳಿಗಾಗಿ ಇದೇ ರಸ್ತೆಯನ್ನು ಅವಲಂಬಿಸಿದ್ದಾರೆ.

ಗುಂಡಿಗಳಿಂದ ಕೂಡಿರುವ ರಸ್ತೆಯಲ್ಲಿ ದ್ವಿಚಕ್ರ ವಾಹನ ಸವಾರರು, ಆಟೋ ರಿಕ್ಷಾ ಚಾಲಕರು ಹಾಗೂ ಖಾಸಗಿ ವಾಹನ ಚಾಲಕರು ಅಪಾಯದ ನಡುವೆಯೇ ಸಂಚರಿಸಬೇಕಾಗಿದೆ. ಗುಂಡಿಗಳನ್ನು ತಪ್ಪಿಸುವ ಪ್ರಯತ್ನದಲ್ಲಿ ಅಪಘಾತಗಳೂ ಸಂಭವಿಸುತ್ತಿವೆ. ಈ ಪ್ರದೇಶದಲ್ಲಿ ಅಂಗನವಾಡಿ, ಕಿರಿಯ ಪ್ರಾಥಮಿಕ ಶಾಲೆ ಹಾಗೂ ಹಾಲು ಉತ್ಪಾದಕರ ಸಂಘಗಳಂತಹ ಪ್ರಮುಖ ಸಂಸ್ಥೆಗಳಿದ್ದರೂ ರಸ್ತೆ ಮಾತ್ರ ನಿರ್ಲಕ್ಷ್ಯಕ್ಕೊಳಗಾಗಿರುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ.

ಕೈಕಂಬದಿಂದ ಮೂರು ಮಾರ್ಗದವರೆಗಿನ ರಸ್ತೆ ಜನ ಹಾಗೂ ವಾಹನ ಸಂಚಾರಕ್ಕೆ ಸಂಪೂರ್ಣ ಅಯೋಗ್ಯವಾಗಿದೆ. ಸಾರ್ವಜನಿಕರ ದೈನಂದಿನ ಬಳಕೆಯ ಈ ರಸ್ತೆಯನ್ನು ತಕ್ಷಣ ದುರಸ್ತಿ ಮಾಡಬೇಕು. ಜೊತೆಗೆ ರಸ್ತೆಯ ಎರಡೂ ಬದಿಗಳಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಕಲ್ಪಿಸಬೇಕು ಎಂದು ಆಟೋ ರಿಕ್ಷಾ ಚಾಲಕ-ಮಾಲೀಕರಾದ ದಿನೇಶ್ ಗೌಡ ಆಗ್ರಹಿಸಿದ್ದಾರೆ.






