ಉಡುಪಿ: ಶ್ರೀ ಕೃಷ್ಣ ಮಠದ ಪಾರ್ಕಿಂಗ್ ಪ್ರದೇಶದಲ್ಲಿ ವಾಹನಕ್ಕೆ ಸೈಡ್ ನೀಡುವ ವಿಚಾರವಾಗಿ ಆಂಧ್ರಪ್ರದೇಶದ ಪ್ರವಾಸಿಗರು ಹಾಗೂ ಸ್ಥಳೀಯ ವ್ಯಕ್ತಿಯ ನಡುವೆ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿ ಉಡುಪಿ ನಗರ ಪೊಲೀಸರು ಒಬ್ಬರನ್ನು ಬಂಧಿಸಿದ್ದಾರೆ.
ಕೊರಂಗ್ರಪಾಡಿ ನಿವಾಸಿ ಸುಪ್ರೀತ್ ಕುಮಾರ್ (40) ಬಂಧಿತ ಆರೋಪಿ. ಮಂಗಳವಾರ ರಾತ್ರಿ ಹೈದರಾಬಾದ್‌ನಿಂದ ಬಂದಿದ್ದ ಪ್ರವಾಸಿಗರ ತಂಡ ಮತ್ತು ಸುಪ್ರೀತ್ ಕುಮಾರ್ ನಡುವೆ ಜನನಿಬಿಡ ಪಾರ್ಕಿಂಗ್ ಪ್ರದೇಶದಲ್ಲಿ ವಾಹನ ಚಲಾಯಿಸುವ ವಿಚಾರವಾಗಿ ವಾಗ್ವಾದ ಉಂಟಾಗಿ ಬಳಿಕ ಮಾರಾಮಾರಿಗೆ ತಿರುಗಿದೆ.

ತಮ್ಮ ಮೇಲೆ ಸುಪ್ರೀತ್ ಕುಮಾರ್ ಅಜಾಗರೂಕತೆಯಿಂದ ವಾಹನ ಚಲಾಯಿಸಿದ್ದು, ಗಲಾಟೆಯ ವೇಳೆ ಕಾರು ಹಾಯಿಸಲು ಯತ್ನಿಸಿದ್ದಾರೆ ಎಂದು ಪ್ರವಾಸಿಗರು ಆರೋಪಿಸಿದ್ದಾರೆ. ಅಲ್ಲದೆ, ವಾಹನದಲ್ಲಿದ್ದ ಕಂಬಳದ ಕೋಲಿನಿಂದ ಹಲ್ಲೆ ನಡೆಸಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಘಟನೆಯಲ್ಲಿ ಕೆಲ ಪ್ರವಾಸಿಗರು ಗಾಯಗೊಂಡಿದ್ದಾರೆ ಎನ್ನಲಾಗಿದೆ.

ಈ ಸಂಬಂಧ ಹೈದರಾಬಾದ್ ನಿವಾಸಿ ಪವನ್ ಅವರು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇದಕ್ಕೆ ಪ್ರತಿಯಾಗಿ, ಸುಪ್ರೀತ್ ಕುಮಾರ್ ಅವರು ಪ್ರವಾಸಿಗರ ವಿರುದ್ಧ ಪ್ರತಿದೂರು ದಾಖಲಿಸಿದ್ದು, ವಾಹನವನ್ನು ನಿಧಾನವಾಗಿ ಚಲಾಯಿಸುವಂತೆ ಹೇಳಿದ್ದಕ್ಕೆ ಪ್ರವಾಸಿಗರು ಕಾರಿನ ಗಾಜು ಒಡೆದು, ಕುರ್ಚಿ ಹಾಗೂ ಫೋಟೋ ಸ್ಟ್ಯಾಂಡ್‌ನಿಂದ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಘಟನೆಯಲ್ಲಿ ತಮ್ಮ ಬಾಯಿಗೆ ಗಾಯವಾಗಿ ರಕ್ತಸ್ರಾವವಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಘಟನೆಯ ವೇಳೆ ಪ್ರವಾಸಿಗರ ತಂಡದಲ್ಲಿ ಮಹಿಳೆಯರು ಮತ್ತು ಮಕ್ಕಳು ಸಹ ಇದ್ದರು. ಪರಿಸ್ಥಿತಿ ಉದ್ವಿಗ್ನಗೊಂಡಾಗ ಸ್ಥಳೀಯರು ಮಧ್ಯಪ್ರವೇಶಿಸಿ ಗಲಾಟೆಯನ್ನು ಶಮನಗೊಳಿಸಿದ್ದಾರೆ.
ಉಡುಪಿ ನಗರ ಪೊಲೀಸರು ಎರಡೂ ಕಡೆಯ ದೂರುಗಳನ್ನು ದಾಖಲಿಸಿಕೊಂಡಿದ್ದು, ಆರೋಪಿ ಸುಪ್ರೀತ್ ಕುಮಾರ್ ಅವರನ್ನು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.





