Breaking
4 Aug 2026, Tue

ಉಡುಪಿ ಕೃಷ್ಣ ಮಠ ಪಾರ್ಕಿಂಗ್‌ನಲ್ಲಿ ಮಾರಾಮಾರಿ: ಎರಡೂ ಕಡೆಯಿಂದ ದೂರು

ಉಡುಪಿ: ಶ್ರೀ ಕೃಷ್ಣ ಮಠದ ಪಾರ್ಕಿಂಗ್ ಪ್ರದೇಶದಲ್ಲಿ ವಾಹನಕ್ಕೆ ಸೈಡ್ ನೀಡುವ ವಿಚಾರವಾಗಿ ಆರಂಭವಾದ ಮಾತಿನ ಚಕಮಕಿ ಮಾರಾಮಾರಿಗೆ ತಿರುಗಿದ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಹೊರರಾಜ್ಯದ ಪ್ರವಾಸಿಗರು ಹಾಗೂ ಸ್ಥಳೀಯ ವ್ಯಕ್ತಿ ನಡುವೆ ನಡೆದ ಗಲಾಟೆಗೆ ಸಂಬಂಧಿಸಿದಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಎರಡೂ ಕಡೆಯಿಂದ ದೂರು ದಾಖಲಾಗಿದೆ.

ಕೊರಂಗ್ರಪಾಡಿ ನಿವಾಸಿ ಸುಪ್ರೀತ್ ಎಂಬ ಕಾರು ಚಾಲಕ ಹೈದರಾಬಾದ್ ಮೂಲದ ಪ್ರವಾಸಿಗರ ಮೇಲೆ ಕಾರು ಹತ್ತಿಸಲು ಯತ್ನಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದನ್ನು ಪ್ರಶ್ನಿಸಿದ ಪ್ರವಾಸಿಗರೊಂದಿಗೆ ತೀವ್ರ ವಾಗ್ವಾದ ನಡೆದಿದ್ದು, ಬಳಿಕ ಕಾರಿನಲ್ಲಿದ್ದ ಕೋಲಿನಿಂದ ಸುಪ್ರೀತ್ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಈ ದೃಶ್ಯ ಮೊಬೈಲ್ ವಿಡಿಯೋದಲ್ಲಿ ಸೆರೆಯಾಗಿದೆ.

ಘಟನೆಯಲ್ಲಿ ಪ್ರವಾಸಿಗರು ಗಾಯಗೊಂಡಿದ್ದು, ಹೈದರಾಬಾದ್ ಮೂಲದ ಪವನ್ ಎಂಬವರು ಸುಪ್ರೀತ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಮತ್ತೊಂದೆಡೆ, ನಿಧಾನವಾಗಿ ಕಾರು ಚಲಾಯಿಸುವಂತೆ ಹೇಳಿದ್ದಕ್ಕೆ ಪ್ರವಾಸಿಗರೇ ಗಲಾಟೆ ಆರಂಭಿಸಿದ್ದು, ತನ್ನ ಕಾರಿನ ಗಾಜು ಜಖಂಗೊಳಿಸಿದ್ದಾರೆ ಎಂದು ಸುಪ್ರೀತ್ ಪ್ರತಿದೂರು ದಾಖಲಿಸಿದ್ದಾರೆ.

ತನ್ನ ಪತ್ನಿಯೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಪ್ರವಾಸಿಗರು ಕುರ್ಚಿ ಹಾಗೂ ಫೋಟೋ ಸ್ಟ್ಯಾಂಡ್‌ನಿಂದ ಹಲ್ಲೆ ನಡೆಸಿದ್ದು, ಇದರಿಂದ ಬಾಯಿಗೆ ಗಾಯವಾಗಿ ರಕ್ತಸ್ರಾವವಾಗಿದೆ ಎಂದು ಸುಪ್ರೀತ್ ದೂರಿನಲ್ಲಿ ತಿಳಿಸಿದ್ದಾರೆ.

ಆಂಧ್ರಪ್ರದೇಶ ಮೂಲದ ಪ್ರವಾಸಿಗರು ಮಹಿಳೆಯರು ಮತ್ತು ಮಕ್ಕಳೊಂದಿಗೆ ಉಡುಪಿಗೆ ಭೇಟಿ ನೀಡಿದ್ದರು. ಗಲಾಟೆ ತೀವ್ರಗೊಂಡ ವೇಳೆ ಸ್ಥಳೀಯರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ.

ಉಡುಪಿ ನಗರ ಠಾಣೆಯಲ್ಲಿ ಎರಡೂ ಕಡೆಯಿಂದ ದೂರು ದಾಖಲಾಗಿದ್ದು, ಘಟನೆಯ ವಿಡಿಯೋವನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *