Breaking
10 Jun 2026, Wed

ಚಾರ್ಮಾಡಿ ಘಾಟಿಯಲ್ಲಿ ದಟ್ಟ ಮಂಜು: ವಾಹನ ಸವಾರರಿಗೆ ಎಚ್ಚರಿಕೆ

ಬೆಳ್ತಂಗಡಿ: ಮುಂಗಾರು ಮಳೆ ಬಿರುಸು ಪಡೆದುಕೊಂಡಿರುವ ಹಿನ್ನೆಲೆಯಲ್ಲಿ ಚಾರ್ಮಾಡಿ ಘಾಟಿ ರಸ್ತೆಯಲ್ಲಿ ದಟ್ಟ ಮಂಜು ಆವರಿಸಿದ್ದು, ವಾಹನ ಸವಾರರು ಹೆಚ್ಚಿನ ಎಚ್ಚರಿಕೆಯಿಂದ ಸಂಚರಿಸುವಂತೆ ಸೂಚಿಸಲಾಗಿದೆ. ಮಂಜಿನ ಸೌಂದರ್ಯ ಪ್ರವಾಸಿಗರನ್ನು ಆಕರ್ಷಿಸುತ್ತಿದ್ದರೂ, ಸಂಚಾರದ ವೇಳೆ ಅಪಾಯದ ಸಾಧ್ಯತೆಗಳು ಹೆಚ್ಚಿರುವುದರಿಂದ ಜಾಗರೂಕತೆ ಅಗತ್ಯವಾಗಿದೆ.

ದಟ್ಟ ಮಂಜಿನ ಕಾರಣ ವಾಹನಗಳ ಹೆಡ್‌ಲೈಟ್‌ಗಳ ಬೆಳಕಿನಲ್ಲೂ ರಸ್ತೆ ಸ್ಪಷ್ಟವಾಗಿ ಕಾಣದ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ, ರಸ್ತೆ ಬದಿಯಲ್ಲಿ ನಿಂತು ಫೋಟೋ ಹಾಗೂ ವಿಡಿಯೋ ತೆಗೆಯುವ ಪ್ರವಾಸಿಗರನ್ನು ಗಮನಿಸದೇ ವಾಹನ ಚಲಾಯಿಸಿದರೆ ಅವಘಡ ಸಂಭವಿಸುವ ಸಾಧ್ಯತೆ ಇದೆ.

ಘಾಟಿ ರಸ್ತೆಯ ವಿವಿಧೆಡೆ ವಾಹನಗಳನ್ನು ನಿಲ್ಲಿಸಿ ಜಲಪಾತಗಳು ಹಾಗೂ ಪ್ರಕೃತಿ ಸೌಂದರ್ಯ ವೀಕ್ಷಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ರಸ್ತೆ ದಾಟುವವರು ಹಾಗೂ ಅಪಾಯದ ಅರಿವು ಇಲ್ಲದೇ ಓಡಾಡುವ ಮಕ್ಕಳು ಇರುವುದರಿಂದ ವಾಹನ ಸವಾರರು ಹೆಚ್ಚು ಎಚ್ಚರಿಕೆಯಿಂದ ವಾಹನ ಚಲಾಯಿಸಬೇಕಾಗಿದೆ.

ನಿರಂತರ ಮಳೆಯಿಂದ ಮಣ್ಣು ಸಡಿಲಗೊಂಡಿದ್ದು, ವಾಹನ ರಸ್ತೆ ಬಿಟ್ಟು ಜಾರಿದರೆ ಕೆಳಕ್ಕೆ ಇಳಿಯುವ ಅಪಾಯವಿದೆ. ಜೊತೆಗೆ ಬಿರುಗಾಳಿಯಿಂದ ಮರಗಳು ರಸ್ತೆಗೆ ಉರುಳುವ ಸಾಧ್ಯತೆಯೂ ಇರುವುದರಿಂದ ನಿಧಾನಗತಿಯಲ್ಲಿ ಸಂಚರಿಸುವುದು ಸುರಕ್ಷಿತ.

ಕರಾವಳಿ ಭಾಗವನ್ನು ಮಲೆನಾಡು ಮತ್ತು ಬಯಲುಸೀಮೆಯೊಂದಿಗೆ ಸಂಪರ್ಕಿಸುವ ಪ್ರಮುಖ ಮಾರ್ಗವಾದ ಚಾರ್ಮಾಡಿ ಘಾಟಿಯಲ್ಲಿ ಪ್ರತಿದಿನ ಸಾವಿರಾರು ವಾಹನಗಳು ಸಂಚರಿಸುತ್ತಿವೆ. ಧರ್ಮಸ್ಥಳಕ್ಕೆ ತೆರಳುವ ಭಕ್ತರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಬರುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗುತ್ತಿದೆ.

ಮುಂದಿನ ದಿನಗಳಲ್ಲಿ ಜಲಪಾತಗಳು, ಹಸಿರು ಪರಿಸರ ಹಾಗೂ ಪ್ರಕೃತಿ ಸೌಂದರ್ಯ ವೀಕ್ಷಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುವ ನಿರೀಕ್ಷೆಯಿದ್ದು, ಎಲ್ಲ ವಾಹನ ಸವಾರರು ಸಂಚಾರ ನಿಯಮ ಪಾಲಿಸಿ ಸುರಕ್ಷತೆಗೆ ಆದ್ಯತೆ ನೀಡುವಂತೆ ಮನವಿ ಮಾಡಲಾಗಿದೆ.

Leave a Reply

Your email address will not be published. Required fields are marked *