ಬಂಟ್ವಾಳ: ನೇತ್ರಾವತಿ ನದಿಯಲ್ಲಿ ವ್ಯಕ್ತಿಯೋರ್ವನ ಮೃತದೇಹ ಪತ್ತೆಯಾಗಿರುವ ಘಟನೆ ಬಂಟ್ವಾಳದ ಬಿಸಿರೋಡು ಸಮೀಪದ ಪಾಣೆಮಂಗಳೂರು ನೂತನ ಸೇತುವೆ ಕೆಳಭಾಗದಲ್ಲಿ ನಡೆದಿದೆ. ಮೃತರನ್ನು ಗೂಡಿನ ಬಳಿ ನಿವಾಸಿ ಮಹಮ್ಮದ್ ಅವರ ಪುತ್ರ ಇರ್ಫಾನ್ (36) ಎಂದು ಗುರುತಿಸಲಾಗಿದೆ.

ಇಂದು ಬೆಳಿಗ್ಗೆ ಸುಮಾರು 9 ಗಂಟೆ ವೇಳೆಗೆ ಬಂಟ್ವಾಳ ಪುರಸಭೆಯ ಪೌರಕಾರ್ಮಿಕರು ತ್ಯಾಜ್ಯ ನಿರ್ವಹಣೆ ಕಾರ್ಯದಲ್ಲಿ ತೊಡಗಿದ್ದ ವೇಳೆ ನದಿಯಲ್ಲಿ ಮೃತದೇಹ ತೇಲುತ್ತಿರುವುದು ಕಂಡುಬಂದಿದೆ. ತಕ್ಷಣವೇ ಬಂಟ್ವಾಳ ನಗರ ಠಾಣೆ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಪೊಲೀಸರು ಹಾಗೂ ಸ್ಥಳೀಯರ ಸಹಾಯದಿಂದ ಮೃತದೇಹವನ್ನು ಮೇಲಕ್ಕೆತ್ತಲಾಯಿತು.

ಆರಂಭದಲ್ಲಿ ಮೃತದೇಹದ ಗುರುತು ಪತ್ತೆಯಾಗದ ಹಿನ್ನೆಲೆ ಅದನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಯ ಶವಗಾರದ ಶೀತಲೀಕರಣ ಘಟಕದಲ್ಲಿ ಇರಿಸಲಾಗಿತ್ತು. ಬಳಿಕ ಸಂಜೆ ವೇಳೆಗೆ ಮೃತರು ಇರ್ಫಾನ್ ಎಂಬುದು ದೃಢಪಟ್ಟಿದೆ.
ಮೃತ ಇರ್ಫಾನ್ ಕಳೆದ ಮೂರು ವರ್ಷಗಳ ಕಾಲ ಸೌದಿ ಅರೇಬಿಯಾದಲ್ಲಿ ಉದ್ಯೋಗದಲ್ಲಿದ್ದು, ಬಳಿಕ ಊರಿಗೆ ಮರಳಿ ಸ್ವಂತ ರಿಕ್ಷಾ ಖರೀದಿಸಿ ಜೀವನ ಸಾಗಿಸುತ್ತಿದ್ದರು. ವಿವಾಹಿತನಾಗಿರುವ ಅವರಿಗೆ ಮೂವರು ಮಕ್ಕಳಿದ್ದಾರೆ.

ಇರ್ಫಾನ್ ಕಳೆದ ಮೂರು ದಿನಗಳಿಂದ ಕಾಣೆಯಾಗಿದ್ದರು. ಇದೀಗ ಅವರ ಮೃತದೇಹ ಸಂಶಯಾಸ್ಪದ ರೀತಿಯಲ್ಲಿ ನದಿಯಲ್ಲಿ ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಮೃತದೇಹದ ಕೈ ಭಾಗದಲ್ಲಿ ಗಾಯಗಳಿರುವುದಾಗಿ ಕುಟುಂಬಸ್ಥರು ಆರೋಪಿಸಿದ್ದು, ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿದ್ದಾರೆ.

ಮರಣೋತ್ತರ ಪರೀಕ್ಷೆ ನಡೆಸಿ ನ್ಯಾಯ ಒದಗಿಸಿಕೊಡಬೇಕೆಂದು ಕುಟುಂಬಸ್ಥರು ಆಗ್ರಹಿಸಿದ್ದು, ಆಸ್ಪತ್ರೆ ಆವರಣದಲ್ಲಿ ನೂರಾರು ಜನರು ಜಮಾಯಿಸಿರುವ ದೃಶ್ಯ ಕಂಡುಬಂದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.


