ಬೆಳ್ತಂಗಡಿ: ತಾಲೂಕಿನ ಗೇರುಕಟ್ಟೆಯಲ್ಲಿ ನಡೆದ ದುರ್ಘಟನೆಯೊಂದು ಇದೀಗ ವೈದ್ಯರ ನಿರ್ಲಕ್ಷ್ಯದ ಆರೋಪದೊಂದಿಗೆ ಹೊಸ ತಿರುವು ಪಡೆದುಕೊಂಡಿದೆ.

ಗೇರುಕಟ್ಟೆ ನಿವಾಸಿ 35 ವರ್ಷದ ಮಹಮ್ಮದ್ ಶರೀಫ್ ಅವರು ಮೇ 14ರಂದು ಮನೆಯಲ್ಲಿದ್ದ ವೇಳೆ ಹೋರಿ ಹಾಯ್ದು ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ಅವರನ್ನು ಉಪ್ಪಿನಂಗಡಿಯ ಸೂರ್ಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.

ಆದರೆ, ಆಸ್ಪತ್ರೆಯ ವೈದ್ಯರು ನಿರ್ಲಕ್ಷ್ಯದಿಂದ ಚಿಕಿತ್ಸೆ ನೀಡಿದ ಪರಿಣಾಮ ಶರೀಫ್ ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಹದಗೆಟ್ಟಿತು ಎಂದು ಕುಟುಂಬದವರು ಆರೋಪಿಸಿದ್ದಾರೆ. ಬಳಿಕ ಮೇ 16ರಂದು ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೇ 20ರಂದು ಅವರು ಮೃತಪಟ್ಟಿದ್ದಾರೆ.

ಈ ಸಂಬಂಧ ಮೃತರ ಸಹೋದರ ಗೇರುಕಟ್ಟೆ ನಿವಾಸಿ ನಾಸಿರುದ್ದೀನ್.ಪಿ. ಬಿನ್ ಸೂಫಿ ಬ್ಯಾರಿ. ಅವರು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ಯು.ಡಿ.ಆರ್ : 28/2026, ಕಲಂ: 194(3) (iv) ಬಿ.ಎನ್.ಎಸ್ಎ.ಸ್ 2023 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಇದೇ ವೇಳೆ ವೈದ್ಯರ ನಿರ್ಲಕ್ಷ್ಯದ ಆರೋಪಗಳನ್ನು ಪರಿಶೀಲಿಸಲು ವೈದ್ಯಕೀಯ ತಜ್ಞರ ತಂಡ ರಚಿಸುವಂತೆ ಸಂಬಂಧಪಟ್ಟ ಇಲಾಖೆಗೆ ಪತ್ರ ಬರೆದಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ. ವರದಿ ಬಂದ ನಂತರ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದ್ದಾರೆ.


