ಬಂಟ್ವಾಳ, ಮೇ 18: ಸಂಚರಿಸುತ್ತಿದ್ದ ಲಾರಿಯೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ಸಂಪೂರ್ಣವಾಗಿ ಬೆಂಕಿಗಾಹುತಿಯಾದ ಘಟನೆ ಬಂಟ್ವಾಳ ತಾಲೂಕಿನ ಮೆಲ್ಕಾರ್‌ನಲ್ಲಿ ನಡೆದಿದೆ.

ಬೆಂಗಳೂರು ಮೂಲದ ಈ ಲಾರಿ ಮಂಗಳೂರು ಕಡೆಯಿಂದ ಬೆಂಗಳೂರು ಕಡೆಗೆ ಸಾಗುತ್ತಿದ್ದ ವೇಳೆ ಮೆಲ್ಕಾರ್ ಪ್ರದೇಶದಲ್ಲಿ ಏಕಾಏಕಿ ಹೊಗೆ ಕಾಣಿಸಿಕೊಂಡು ಬಳಿಕ ಬೆಂಕಿ ವ್ಯಾಪಿಸಿದೆ ಎನ್ನಲಾಗಿದೆ.

ಗುಜರಿ ಸಾಮಗ್ರಿಗಳನ್ನು ಸಾಗಾಟ ಮಾಡುತ್ತಿದ್ದ ಲಾರಿಯಲ್ಲಿದ್ದ ವಸ್ತುಗಳು ಬೆಂಕಿಗೆ ಆಹುತಿಯಾಗಿದ್ದು, ಕ್ಷಣಾರ್ಧದಲ್ಲಿ ಬೆಂಕಿ ಲಾರಿಯನ್ನೇ ಆವರಿಸಿದೆ. ಘಟನೆಯ ಮಾಹಿತಿ ತಿಳಿದು ಬಂಟ್ವಾಳ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿದರು.

ಗುಜರಿ ಸಾಮಗ್ರಿಗಳ ನಡುವೆ ಇದ್ದ ಬ್ಯಾಟರಿ ಶಾರ್ಟ್ ಸರ್ಕ್ಯೂಟ್‌ನಿಂದಲೇ ಬೆಂಕಿ ಕಾಣಿಸಿಕೊಂಡಿರುವ ಸಾಧ್ಯತೆ ಇದೆ ಎಂದು ಪ್ರಾಥಮಿಕ ಮಾಹಿತಿ ತಿಳಿದುಬಂದಿದೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ವರದಿಯಾಗಿದೆ.


