Breaking
5 Sep 2026, Sat

ಉದ್ಯೋಗ, ವೀಸಾ ಆಮಿಷ: ಯುವತಿಗೆ ₹4.12 ಲಕ್ಷ ವಂಚನೆ

ಮಂಗಳೂರು: ಉದ್ಯೋಗ ಹಾಗೂ ವೀಸಾ ಕೊಡಿಸುವುದಾಗಿ ನಂಬಿಸಿ ಯುವತಿಯೋರ್ವಳಿಂದ ₹4,12,850 ಹಣ ಪಡೆದು ವಂಚಿಸಿರುವ ಬಗ್ಗೆ ಮಂಗಳೂರು ನಗರದ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯುವತಿ ಏಪ್ರಿಲ್ 13ರಂದು ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂ ವೀಕ್ಷಿಸುತ್ತಿದ್ದ ವೇಳೆ ‘ರಿಕ್ರೂಟಿಂಗ್ ಏಜೆನ್ಸಿ’ ಹೆಸರಿನ ಖಾತೆಯಲ್ಲಿ ಉದ್ಯೋಗ ನೇಮಕಾತಿಗೆ ಸಂಬಂಧಿಸಿದ ಪೋಸ್ಟ್ ಗಮನಕ್ಕೆ ಬಂದಿದೆ. ಅದರಲ್ಲಿ ಕ್ರೂಸ್ ಹಡಗಿನಲ್ಲಿ ಉದ್ಯೋಗಾವಕಾಶ ಇರುವುದಾಗಿ ಉಲ್ಲೇಖಿಸಲಾಗಿತ್ತು.

ಈ ಹಿನ್ನೆಲೆಯಲ್ಲಿ ಪೋಸ್ಟ್‌ನಲ್ಲಿ ನೀಡಿದ್ದ ಮೊಬೈಲ್ ಸಂಖ್ಯೆಗೆ ಯುವತಿ ಕರೆ ಮಾಡಿ ಮಾಹಿತಿ ಪಡೆದಿದ್ದರು. ಆಗ ಅಪರಿಚಿತ ವ್ಯಕ್ತಿಯೋರ್ವನು ತಾನು ಅಮೆರಿಕದ ಜಾನ್ ಫೆವಿಲಿನ್ ಎಂದು ಪರಿಚಯಿಸಿಕೊಂಡು, ‘ಪ್ರಿನ್ಸೆಸ್ ಕ್ರೂಸ್ ಲೈನ್ಸ್ ಲಿ.’ ಸಂಸ್ಥೆಯ ಮ್ಯಾನೇಜರ್ ಆಗಿರುವುದಾಗಿ ತಿಳಿಸಿದ್ದಾನೆ ಎನ್ನಲಾಗಿದೆ.

ಆರಂಭದಲ್ಲಿ ನೋಂದಣಿ ಶುಲ್ಕವಾಗಿ ₹10,000 ಪಾವತಿಸಲು ಸೂಚಿಸಿದ್ದಾನೆ. ಬಳಿಕ ವರ್ಕ್ ಪರ್ಮಿಟ್, ವೀಸಾ ಪ್ರೊಸೆಸಿಂಗ್ ಹಾಗೂ ಇತರ ಶುಲ್ಕಗಳ ಹೆಸರಿನಲ್ಲಿ ಹಂತ ಹಂತವಾಗಿ ಹಣ ವರ್ಗಾಯಿಸುವಂತೆ ಹೇಳಿದ್ದಾನೆ. ಯುವತಿ ಗೂಗಲ್ ಪೇ ಮೂಲಕ ಹಣ ಪಾವತಿಸಿದ್ದು, ಒಟ್ಟು ₹4,12,850 ಪಡೆದು ವಂಚಿಸಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.

ಯುವತಿ ನೀಡಿದ ದೂರಿನ ಮೇರೆಗೆ ಮಂಗಳೂರು ದಕ್ಷಿಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Leave a Reply

Your email address will not be published. Required fields are marked *