ಗ್ಯಾರಂಟಿ ಕೊಡುಗೆಗಳ ಹೆಸರಿನಲ್ಲಿ ಅಧಿಕಾರ ಗಿಟ್ಟಿಸಿ ಕೊಂಡಿರುವ ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರವು ತನ್ನ ಗ್ಯಾರಂಟಿ ಯೋಜನೆಗಳಿಗೆ ನೀಡುವ ಹಣದ ಕೊರತೆಯನ್ನು ನಿಗಿಸಲು ಆರ್ಥಿಕ ಹೊಂದಾಣಿಕೆಗಾಗಿ ಹಿರಿಯರಿಗೆ ನೀಡುವ ಸಂದ್ಯಾ ಸುರಕ್ಷಾ,ವಿಧವೆಯರ ವಿಧವಾ ವೇತನ, ವೃದ್ದರ ವೃದ್ದಾಪ್ಯ ವೇತನ, ವಿಕಲಚೇತನರ ವಿಕಲಚೇತನ ವೇತನ ಸೇರಿದಂತೆ ಬಡವರ ಪಿಂಚಣಿ ಸೌಲಭ್ಯಗಳಿಗೆ ಕೈ ಹಾಕಿರುವುದು ರಾಜ್ಯ ಕಾಂಗ್ರೆಸ್ ಸರಕಾರದ ದಿವಾಳಿಗೆ ಸಾಕ್ಷಿಯಾಗಿದೆ ಎಂದೂ ಬಂಟ್ವಾಳ ತಾಲೂಕು ಪಂಚಾಯತ್ ಮಾಜಿ ಸದಸ್ಯ, ಬಿಜೆಪಿ ಮುಖಂಡರಾದ ಪ್ರಭಾಕರ ಪ್ರಭು ರಾಜ್ಯ ಸರಕಾರದ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.

ರಾಜ್ಯದ ಈ ಹಿಂದಿನ ಬಿಜೆಪಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪರವರು ತಮ್ಮ ಅದಿಕಾರದ ಅವಧಿಯಲ್ಲಿ ಎ.ಪಿ.ಎಲ್ ಪಡಿತರ ಚೀಟಿ ಹೊಂದಿ ಒಂದೆರಡು ಗಂಡು ಮಕ್ಕಳು ಇದ್ರೂ ಸಹ ಹಿರಿಯ ನಾಗರೀಕರ ಹಿತದ್ರಷ್ಟಿಯಿಂದ 65 ವರ್ಷ ಮೇಲ್ಪಟ್ಟ ವಯೋ ವೃದ್ದರಿಗೆ ಜೀವನ ಆಶ್ರಯಕ್ಕಾಗಿ ಮಾಸಿಕ 1200 ರೂ ಪಿಂಚಣಿ ಒದಗಿಸುವ ಸಂಧ್ಯಾ ಸುರಕ್ಷಾ ಯೋಜನೆ ಜಾರಿಗೆ ತಂದಿರುವುದು ಹಲವಾರು ಮಂದಿ ಹಿರಿಯರಿಗೆ ಅನುಕೂಲವಾಗಿದೆ.
ಇದೀಗ ರಾಜ್ಯ ಸರಕಾರವು ಗ್ಯಾರಂಟಿ ಕೊಡುಗೆಗೆ ಹಣಕಾಸಿನ ಕೊರತೆ ನೀಗಿಸಲು ಪಿಂಚಣಿ ದಾರರ ಆದಾಯ ಮಿತಿ ನೆಪವಾಗಿಟ್ಟು ಕೊಂಡು ಎಪಿಎಲ್ ಪಡಿತರದವರದ್ದು ಸಂಪೂರ್ಣ ರದ್ದು ಮಾಡುವುದರೊಂದಿಗೆ ಕುಟುಂಬದ ವಾರ್ಷಿಕ ಆದಾಯ 32 ಸಾವಿರ ಮೀರಿದವರ ಹಾಗೂ ಪಡಿತರ ಚೀಟಿಯಲ್ಲಿ ಒಬ್ಬ ಮಗನಿಗಿಂತ ಜಾಸ್ತಿ ಮಕ್ಕಳು ಇರುವವರ ವಿವಿಧ ಪಿಂಚಣಿಗಳನ್ನು ರದ್ದು ಮಾಡಲು ಹೊರಟಿರುವುದು ತುಂಬಾ ನೋವಿನ ಸಂಗತಿಯಾಗಿದೆ.

ಇದರಿಂದ ಸಂಧ್ಯಾ ಸುರಕ್ಷಾ ಯೋಜನೆಯ ಬಹುಪಾಲು ಪಲಾನುಭವಿಗಳು ಪಿಂಚಣಿ ಸೌಲ್ಯಭದಿಂದ ವಂಚಿತರಾಗಲಿದ್ದಾರೆ. ಇದೇ ಆದಾಯ ಮಿತಿಯನ್ನು ವಿಕಲಚೇತನರಿಗೂ ಅನ್ವಯಮಾಡಿರುವುದರಿಂದ ವಿಕಲಚೇತನರ ಬದುಕಿಗೂ ರಾಜ್ಯ ಸರಕಾರ ತೊಂದರೆ ಮಾಡುತ್ತಿದೆ.

ಕಂದಾಯ ಮೂಲಗಳ ಪ್ರಕಾರ ರಾಜ್ಯದಲ್ಲಿ ಲಕ್ಷಾಂತರ ಪಿಂಚಣಿದಾರರ ಪಿಂಚಣಿ ರದ್ದಾಗಳಿದ್ದು ಬಂಟ್ವಾಳದಲ್ಲಿ 13 ಸಾವಿರಕ್ಕೂ ಮಿಕ್ಕಿ ವಿವಿಧ ಪಿಂಚಣಿ ರದ್ದಾಗಳಿವೆ ಎಂದೂ ತಿಳಿದು ಬಂದಿದೆ.

ರಾಜ್ಯ ಸರಕಾರವು ತಕ್ಷಣವೇ ಈ ನಿರ್ಧಾರ ವಾಪಾಸ್ ಪಡೆಯುವ ಮೂಲಕ ಯಥಾವತ್ತಾಗಿ ವಿವಿಧ ಪಿಂಚಣಿ ಸೌಲ್ಯಭಗಳನ್ನು ಮುಂದುವರಿಸಬೇಕು ಎಂದೂ ರಾಜ್ಯ ಸರಕಾರವನ್ನು ಪ್ರಭಾಕರ ಪ್ರಭು ಅಗ್ರಹ ಪಡಿಸಿದ್ದಾರೆ.


