ಬೆಳ್ತಂಗಡಿ: ಕಳಿಯ ಗ್ರಾಮದ ಗೇರುಕಟ್ಟೆ ಸಮೀಪ ಶ್ರೀಧರ ಮುಗೇರ ಎಂಬಾತನ ಸಂಶಯಾಸ್ಪದ ರೀತಿಯಲ್ಲಿ ಕೆರೆಯಲ್ಲಿ ಶವ ಸಿಕ್ಕ ಪ್ರಕರಣ ನಡೆದು ವರ್ಷ ಕಳೆದರೂ ಇನ್ನೂ ಸರಿಯಾದ ದಿಕ್ಕಿನಲ್ಲಿ ತನಿಖೆ ನಡೆದಿಲ್ಲ. ತನಿಖೆ ಯಾವ ಕಾರಣಕ್ಕೆ ವಿಳಂಬ ಆಗುತ್ತಿದೆ, ತಕ್ಷಣ ಆರೋಪಿಗಳನ್ನು ಪತ್ತೆ ಹಚ್ಚಬೇಕು ಎಂಬ ವಿಚಾರ ಏ. 28 ರಂದು ಬೆಳ್ತಂಗಡಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಪರಿಶಿಷ್ಟ ಜಾತಿ, ಪಂಗಡದ ಕುಂದುಕೊರತೆ ಸಭೆಯಲ್ಲಿ ಪ್ರಸ್ತಾಪವಾಯಿತು.



ದಲಿತ ಮುಖಂಡ ಸಂಜೀವ ಆರ್.ಕೇಳಿದ ಈ ಪ್ರಶ್ನೆಗೆ ಡಿವೈಎಸ್ಪಿ ರೋಹಿಣಿ ಸಿ.ಕೆ.ಉತ್ತರಿಸಿ ಆತ ಬಳಸಿದ ಮೊಬೈಲ್ ಫೋನ್ ಮಾಹಿತಿ ಸಂಗ್ರಹವಾಗುತ್ತಿದ್ದು, ಅದರ ವರದಿ ಇನ್ನು ಬಂದಿಲ್ಲ. ಪ್ರಕರಣದ ತನಿಖೆ ಮುಂದುವರಿದಿದೆ ಎಂದು ತಿಳಿಸಿದರು.

ಬೆಳಾಲಿನಲ್ಲಿ ಕಳೆದ ಜುಲೈ ತಿಂಗಳಲ್ಲಿ ವೀಣಾ ಎಂಬಾಕೆಯ ಶವ ಮನೆಯ ಬಾವಿಯಲ್ಲಿ ಪತ್ತೆಯಾದ ಪ್ರಕರಣವು ಸೂಕ್ತ ರೀತಿಯಲ್ಲಿ ತನಿಖೆಯಾಗಬೇಕು. ಆಕೆಯ ಮಗುವನ್ನು ಆಕೆಯಿಂದ ದೂರ ಮಾಡಿ ಮಾರಾಟ ಮಾಡಿರುವ ಸಾಧ್ಯತೆಯಿದೆ. ಇದರಿಂದ ನೊಂದ ಆಕೆ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಯಿದೆ. ಈ ಬಗ್ಗೆ ತನಿಖೆ ನಡೆಸಬೇಕು ಎಂದು ಸೇಸಪ್ಪ ನಲ್ಕೆ ಅಳದಂಗಡಿ ಒತ್ತಾಯಿಸಿದರು. ಪ್ರಕರಣದ ತನಿಖೆ ನಡೆಯುತ್ತಿರುವ ಬಗ್ಗೆ ಮತ್ತು ಘಟನೆಯ ನಂತರ ಮಗುವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೂಲಕ ಪುತ್ತೂರು ವಿವೇಕಾನಂದ ಆಶ್ರಮಕ್ಕೆ ಸೇರಿಸಲಾಗಿತ್ತು. ಇದೀಗ ಮಗುವಿನ ಅಜ್ಜ ನಾಗೇಶ್ ಅವರು ಕಾನೂನು ಪ್ರಕಾರ ಮಗುವನ್ನು ಪಡೆದುಕೊಂಡಿದ್ದಾರೆ ಎಂದು ಧರ್ಮಸ್ಥಳ ಪಿಎಸ್ಐ ಸಮರ್ಥ ಆರ್ ಗಾಣಿಗೇರ್ ಸಭೆಗೆ ತಿಳಿಸಿದರು.

ತಾಲೂಕಿನಲ್ಲಿ ಗಾಂಜಾ ಮಾದಕ ದ್ರವ್ಯಗಳ, ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಶಾಲಾ-ಕಾಲೇಜು ಪರಿಸರಕ್ಕೂ ಗಾಂಜಾ ವಾಸನೆ ಹರಡಿರುವುದು ಖಂಡನೀಯ.
ಗಾಂಜಾ ಪೂರೈಕೆದಾರರನ್ನು ಪತ್ತೆ ಹಚ್ಚುವಂತೆ ಬಿ.ಕೆ ವಸಂತ ಆಗ್ರಹಿಸಿದರು.
ಲಾಯಿಲ ದರ್ಪಿಂಜೆ ಸೇತುವೆಯಲ್ಲಿ ಮದ್ಯಪಾನ ಮಾಡುತ್ತಾ ಮಜಾ ಮಾಡುವ ಗುಂಪು ಸಾರ್ವಜನಿಕರ ಶಾಂತಿಭಂಗಕ್ಕೆ ಕಾರಣವಾಗುವುದಲ್ಲದೆ, ವಾಹನ ಸಂಚಾರಕ್ಕೂ ಅಡ್ಡಿಯಾಗುತ್ತಿರುವ ಕುರಿತು ಶೇಖರ ಲಾಯಿಲ ಸಭೆಯ ಗಮನಕ್ಕೆ ತಂದರು. ಅಂಥವರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳುವ ಕುರಿತು ಭರವಸೆ ನೀಡಲಾಯಿತು.

ಬೆಳ್ತಂಗಡಿ ಪೊಲೀಸ್ ಠಾಣೆಗೆ ಇನ್‌ಸ್ಪೆಕ್ಟರ್ ನೇಮಕವಾಗಬೇಕು, ಜಿಲ್ಲಾ ಎಸ್ ಪಿ ನೇತೃತ್ವದಲ್ಲಿ ಸಭೆ ನಡೆಯಬೇಕು, ಆದರೆ ಎಸ್ ಪಿ ಸಭೆಗೆ ಹಾಜರಾಗುತ್ತಿಲ್ಲ, ಎರಡು ತಿಂಗಳಿಗೆ ಒಂದು ಬಾರಿಯಾದರೂ ಸಭೆಗೆ ಆಗಮಿಸುವಂತೆ ಶೇಖರ್ ಲಾಯಿಲ ಆಗ್ರಹಿಸಿದರು.

ಹಿರಿಯ ಅಧಿಕಾರಿಗಳು ಎಸಿ ರೂಮ್ ಗಳಲ್ಲಿ ಕುಳಿತು ಆದೇಶ ನೀಡುವುದಲ್ಲ, ಜನಸಾಮಾನ್ಯರೊಂದಿಗೆ ಬೆರೆತು ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕು ಎಂದರು. ಎಸ್ಸಿ ಎಸ್ಟಿ ದೌರ್ಜನ್ಯ ಮಾಹಿತಿಯ ಅಂಕಿ ಅಂಶ ನೀಡಬೇಕು, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಸಭೆಗೆ ಯಾಕೆ ಹಾಜರಾಗಿಲ್ಲ ಎಂದು ನೇಮಿರಾಜ್ ಕಿಲ್ಲೂರು , ಶೇಖರ್ ಕುಕ್ಕೇಡಿ , ರಮೇಶ್ ಆರ್ ಪ್ರಶ್ನಿಸಿದರು. ಧರ್ಮಸ್ಥಳ ಕೆಎಸ್ಸಾರ್ಟಿಸಿ ಅಧಿಕಾರಿಗಳು ಸ್ವಚ್ಛತಾ ಸಿಬ್ಬಂದಿಯನ್ನು ಅವಮಾನಿಸಿರುವುದು ಸರಿಯಲ್ಲ. ಅತ್ಯಂತ ಶೋಷಣೆಗೊಳಗಾದ ಕೊರಗ ಸಮುದಾಯದ ಮಹಿಳೆಯನ್ನು ಪೋಲಿಸ್ ಇಲಾಖೆ ಕೂಡ ಅತ್ಯಂತ ನಿಷ್ಕೃಷ್ಟವಾಗಿ ನಡೆಸಿಕೊಂಡಿರುವುದು ಸರಿಯಲ್ಲ ಎಂದು ತರಾಟೆಗೆ ತೆಗೆದುಕೊಂಡರು. ಸಿ. ಕೆ.ಚಂದ್ರಕಲಾ ಮಾತನಾಡುತ್ತಾ ಯುವಜನರು ದುಷ್ಚಟಗಳಿಗೆ ಬಲಿಯಾಗಿ ದಾರಿ ತಪ್ಪುತ್ತಿದ್ದಾರೆ. ಉಜಿರೆಯಲ್ಲಿ ಯುವಕನೊಬ್ಬ ತಂದೆಯನ್ನೇ ಕೊಲೆ ಮಾಡಲು ಯತ್ನಿಸಿದ ಘಟನೆ ಅತ್ಯಂತ ಅಪಾಯಕಾರಿ ಪೋಲಿಸ್ ಇಲಾಖೆ ದಲಿತ ಕಾಲನಿಗಳಿಗೆ ಭೇಟಿ ನೀಡಿ ಕಾನೂನು ಮಾಹಿತಿ ನೀಡಬೇಕು ಎಂದರು.
ಕೊಯ್ಯೂರು ಗ್ರಾಮದಲ್ಲಿ ಮಲೆಕುಡಿಯ ಸಮುದಾಯದ ಮಂಜೂರು ಜಮೀನು ಸೇರಿದಂತೆ ಸ್ವಾದೀನಪಡಿಸಿಕೊಂಡು 60-70 ವರ್ಷಗಳಿಂದ ಮನೆ ನಿರ್ಮಾಣ ಮಾಡಿಕೊಂಡು , ಕೃಷಿ ಮಾಡಿಕೊಂಡಿರುವ ಜಮೀನಿನಲ್ಲಿ ಏಕಾಏಕಿ ಯಾವುದೇ ಮಾಹಿತಿ ನೀಡದೆ ಅರಣ್ಯ ಇಲಾಖೆ ಕಲ್ಲಿನ ಗುಪ್ಪೆಗಳನ್ನು ನಿರ್ಮಾಣ ಮಾಡುತ್ತಿದೆ.

ಜಿಲ್ಲೆಯಲ್ಲಿ ಅರಣ್ಯ , ಕಂದಾಯ ಜಮೀನಿನ ಬಗ್ಗೆ ಗೊಂದಲಗಳಿದ್ದು , ಜಂಟಿ ಸರ್ವೆ ಕಾರ್ಯ ನಡೆಸದೇ ಅರಣ್ಯ ಇಲಾಖೆ ಗುಪ್ಪೆಗಳನ್ನು ನಿರ್ಮಾಣ ಮಾಡುತ್ತಿರುವುದು ಕಾನೂನು ಬಾಹಿರ ಕ್ರಮ. ಈ ಕೂಡಲೇ ಅರಣ್ಯ ಇಲಾಖೆ ತನ್ನ ಕಾರ್ಯವನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಅರಣ್ಯ ಅಧಿಕಾರಿಗಳನ್ನು ತಡೆದು ನಿಲ್ಲಿಸಬೇಕಾಗುತ್ತದೆ ಎಂದು ಶೇಖರ್ ಲಾಯಿಲ ಸಭೆಯಲ್ಲಿ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಡಿವೈಎಸ್ಪಿ ರೋಹಿಣಿ ಸಿ.ಕೆ ಜನರಿಗೆ ಸ್ಪಷ್ಟ ಮಾಹಿತಿ ನೀಡಲು ತಿಳಿಸುವುದಾಗಿ ಹೇಳಿದರು. ಅರಣ್ಯ , ಕಂದಾಯ ಇಲಾಖೆಯ ಜಂಟಿ ಸರ್ವೆಕಾರ್ಯ ನಡೆಸುವ ಮೊದಲು ಗುಪ್ಪೆಕಾರ್ಯ ಸ್ಥಗಿತಗೊಳಿಸಬೇಕು , ಇಲ್ಲದಿದ್ದರೆ ಜನರು ರೊಚ್ಚಿಗೆದ್ದು ಕಾನೂನು ಸುವ್ಯವಸ್ಥೆಗೆ ಅಡ್ಡಿಯಾಗಬಹುದು ಎಂದು ಶೇಖರ್ ಲಾಯಿಲ ಹೇಳಿದರು.

ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯವು ಪ್ರಸ್ತುತ ಪರಿಶಿಷ್ಟ ಜಾತಿ/ಪಂಗಡಗಳ ದೌರ್ಜನ್ಯ ತಡೆ ಪೋಲಿಸ್ ಠಾಣೆಯಾಗಿ ಕಾರ್ಯನಿರ್ವಹಿಸುತ್ತಿದ್ದು, ಇಲ್ಲಿಗೆ ಜಿಲ್ಲೆಯ 42 ಪೋಲಿಸ್ ಠಾಣೆಗಳ ದಲಿತ ದೌರ್ಜನ್ಯ ಪ್ರಕರಣಗಳ ತನಿಖೆ, ಆರೋಪಿಗಳ ಬಂಧನ, ನ್ಯಾಯಾಲಯಕ್ಕೆ ಅಂತಿಮ ವರದಿ ಸೇರಿದಂತೆ ವಿವಿಧ ಕೆಲಸಗಳನ್ನು ನಿರ್ವಹಿಸಲು ಸಿಬ್ಬಂದಿಗಳ ಕೊರತೆಯಿದ್ದು, ಪ್ರಸ್ತುತ ಓರ್ವ ಎಸ್ಪಿ, ಇನ್ಸ್‌ಪೆಕ್ಟರ್, ಸಬ್ ಇನ್ಸ್‌ಪೆಕ್ಟರ್, 3 ಹೆಡ್ ಕಾನ್ಸ್‌ಟೇಬಲ್, 6 ಕಾನ್ಸ್‌ಟೇಬಲ್ ಗಳು ಮಾತ್ರವಿದ್ದು, ಇಲ್ಲಿಗೆ ಸೂಕ್ತ ಸಿಬ್ಬಂದಿಗಳ ನೇಮಕವಾಗಬೇಕು ಎಂದು ಶೇಖರ್ ಲಾಯಿಲ ಹೇಳಿದರು.

ಡಿವೈಎಸ್ಪಿ ಕಚೇರಿಯ ಮಹಿಳಾ ಹೆಡ್ ಕಾನ್ಸ್‌ಟೇಬಲ್ ಸವಿತಾ ಶೆಟ್ಟಿ ಸ್ವಾಗತಿಸಿ ಧರ್ಮಸ್ಥಳ ಪೊಲೀಸ್ ಠಾಣೆಯ ಪಿಎಸ್ ಐ ಸಮರ್ಥ್ ಆರ್. ಗಾಣಿಗೇರ್ ವಂದಿಸಿದರು.


