Breaking
27 Apr 2026, Mon

ನೀರು ಕೇಳುವ ನೆಪದಲ್ಲಿ ಮನೆಗೆ ನುಗ್ಗಿದ ಅಪರಿಚಿತ ವ್ಯಕ್ತಿ: ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು

ಉಪ್ಪಿನಂಗಡಿ: ಮನೆಯಲ್ಲಿ ಮಹಿಳೆಯರೇ ಇರುವುದನ್ನು ಗಮನಿಸಿ ಅಪರಿಚಿತ ವ್ಯಕ್ತಿಯೋರ್ವನು ನೀರು ಕೇಳುವ ನೆಪದಲ್ಲಿ ಮನೆಗೆ ನುಗ್ಗಿ ಭೀತಿಯ ವಾತಾವರಣ ಸೃಷ್ಟಿಸಿದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ. ಬಳಿಕ ಸ್ಥಳೀಯರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಬ್ಯಾಂಕ್ ರಸ್ತೆ ಸಮೀಪದ ಮನೆಯೊಂದರಲ್ಲಿ ವೃದ್ಧೆ ಒಬ್ಬಳೇ ಇದ್ದಾಗ ಮನೆಗೆ ನೀರು ಕೇಳುತ್ತಾ ಬಂದ ವ್ಯಕ್ತಿ, ವೃದ್ಧೆ ಅಡುಗೆ ಕೋಣೆಗೆ ನೀರು ತರಲು ತೆರಳಿದ ಕ್ಷಣದಲ್ಲಿ ಮನೆಯೊಳಗೆ ನುಗ್ಗಿ ಬಾಗಿಲಿಗೆ ಚಿಲಕ ಹಾಕಿದ್ದಾನೆ. ಇದನ್ನು ಗಮನಿಸಿದ ವೃದ್ಧೆ ಭಯದಿಂದ ಬೊಬ್ಬೆ ಹಾಕಿದ್ದಾಳೆ.

ಈ ವೇಳೆ ಸಮೀಪದ ಇನ್ನೊಂದು ಮನೆಯಲ್ಲಿದ್ದ ಮಹಿಳೆಯ ಮನೆಗೆ ನುಗ್ಗಲು ಯತ್ನಿಸಿದ ಆತ, ಅಲ್ಲಿಯೂ ಬಾಗಿಲಿಗೆ ಚಿಲಕ ಹಾಕಲು ಪ್ರಯತ್ನಿಸಿದ್ದಾನೆ. ಮಹಿಳೆಯರು ಹಾಗೂ ಸ್ಥಳೀಯರು ಬೊಬ್ಬೆ ಹಾಕಿದಾಗ ಪರಾರಿಯಾದ ವ್ಯಕ್ತಿ ಸಮೀಪದ ಉದ್ಯಮಿಯೋರ್ವರ ಮನೆಯ ಹಿಂಭಾಗದ ಕಟ್ಟಡದಲ್ಲಿ ಅಡಗಿ ಕುಳಿತಿದ್ದನು. ಸ್ಥಳೀಯರು ಹಿಂಬಾಲಿಸಿ ಉದ್ಯಮಿಗೆ ಮಾಹಿತಿ ನೀಡಿ, ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಆರಂಭದಲ್ಲಿ ಮೂಕನಂತೆ ವರ್ತಿಸಿ ಸಂಜ್ಞೆಗಳ ಮೂಲಕ ನೀರು ಕೇಳಿದ್ದ ಈ ವ್ಯಕ್ತಿ, ಬಳಿಕ ಪೊಲೀಸರ ಮುಂದೆ ಮಲಯಾಳಂ ಭಾಷೆಯಲ್ಲಿ ಮಾತನಾಡಿ ತಾನು ರಬ್ಬರ್ ಟ್ಯಾಪಿಂಗ್ ಕೆಲಸ ಮಾಡುವವನಾಗಿರುವುದಾಗಿ ಹೇಳಿಕೊಂಡಿದ್ದಾನೆ.

ಈತನ ಹಿನ್ನೆಲೆ ಬಗ್ಗೆ ಸಂಪೂರ್ಣ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *