ವಿಟ್ಲ: ಕೋಟಿ ಚೆನ್ನಯ ಬಿಲ್ಲವ ಸಂಘ ಪುಣಚ ಇವರ ಆಶ್ರಯದಲ್ಲಿ ಗುರುಪೂಜೆ ಹಾಗೂ ಪದಗ್ರಹಣ ಕಾರ್ಯಕ್ರಮ ಪುಣಚ ಮಹಿಷಮರ್ದಿನಿ ದೇವಸ್ಥಾನದ ವಠಾರದಲ್ಲಿ ನಡೆಯಿತು.
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ನಾರಾಯಣಗುರು ವಿಚಾರ ವೇದಿಕೆಯ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್ ಮಾತನಾಡಿ ಬ್ರಹ್ಮ ಶ್ರೀ ನಾರಾಯಣಗುರುವರ್ಯರು ಆಧುನಿಕ ಸಮಾಜ ನಿರ್ಮಾಣಕ್ಕೆ ದಾರಿ ತೋರಿದವರು. ಶಿಕ್ಷಣ ಮತ್ತು ಸಂಘಟನೆಯ ಪರಿಣಾಮಗಳನ್ನು ಸರಳ ರೀತಿಯಲ್ಲಿ ಕಾರ್ಯ ಸಾಧಿಸಿದ ಸಮಾಜ ಸುಧಾರಕ ಸಾಧಕರಾಗಿದ್ದಾರೆ. ಪ್ರತಿಯೊಂದರಲ್ಲೂ ದೇವರನ್ನು ಕಾಣಿ ಎಂದು ತಿಳಿಸಿದ ಗುರುಗಳ ಒಳ ತುಡಿತವನ್ನು ನಾವು ಅರ್ಥೈಸಿಕೊಂಡು ಮುನ್ನಡೆಯ ಬೇಕಾಗಿದೆ. ನಮ್ಮ ವಿದ್ಯೆ ನಮ್ಮೊಂದಿಗೆ ಇತರರನ್ನೂ ಬೆಳೆಸಬೇಕಾಗಿದೆ ಎಂದರು.
ದೈವಪಾತ್ರಿ, ಮುಂಬೈ ಪತ್ರಕರ್ತ ಸನ್ನಿಧ್ ಪೂಜಾರಿ ಮಾತನಾಡಿ ಒಗ್ಗಟ್ಟಾಗಿ ಯಾವುದೇ ಕಾರ್ಯ ನಡೆಸಿದಾಗ ಯಶಸ್ಸು ಶತಸಿದ್ಧ ಎಂದು ತಿಳಿಸಿದರು.ಪ್ರಸಕ್ತ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ, ಸಜಿಪ ಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಕೆ.ಸಂಜೀವ ಪೂಜಾರಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಬಿಲ್ಲವ ಸಮುದಾಯದ ಬಾಂಧವರು ಸಮಾಜದ ಪ್ರತಿಯೊಂದು ಕ್ಷೇತ್ರಗಳಲ್ಲೂ ಕೌಶಲ್ಯಗಳೊಂದಿಗೆ ಮುಂಚೂಣಿಯಲ್ಲಿ ಮಿಂಚಬೇಕು. ನಾವು ಮಾಡುವ ಪ್ರತಿಯೊಂದು ಸೇವೆ, ಸಾಧನೆಗಳು ಜನಮಾನಸದಲ್ಲಿ ಗುರುತಿಸಿಕೊಳ್ಳುವಂತಾಗಬೇಕು ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಯೋಜನಾಧಿಕಾರಿ ಶ್ವೇತಾ ಎನ್. ಮಾತನಾಡಿ ಆಧುನಿಕತೆಯ ನೆಪದಲ್ಲಿ ಪೋಷಕರು ಮಕ್ಕಳ ಬಾಲ್ಯವನ್ನು ಕಸಿದುಕೊಳ್ಳಬೇಡಿ. ಟಿವಿ, ಮೊಬೈಲ್ ಗಳಂತಹ ಸಾಧನೆಗಳು ದಾಸರನ್ನಾಗಿಸದೇ ವ್ಯಕ್ತಿತ್ವ, ಮೌಲ್ಯಗಳನ್ನು ತುಂಬಿಸಬೇಕು ಆಗಿದೆ ಎಂದರು.
ಕೋಟಿ ಚೆನ್ನಯ ಬಿಲ್ಲವ ಸಂಘದ ಅಧ್ಯಕ್ಷ ರಾಮಕೃಷ್ಣ ಮೂಡಂಬೈಲು ಸಭಾಧ್ಯಕ್ಷತೆ ವಹಿಸಿದ್ದರು.ವಿಟ್ಲ ರೋಟರಿ ಕ್ಲಬ್ ಅಧ್ಯಕ್ಷ ಹರೀಶ್ ಸಿ.ಎಚ್, ಸಂಘದ ಗೌರವಾಧ್ಯಕ್ಷ ಶಿವಪ್ಪ ಪೂಜಾರಿ, ಮಹಿಳಾ ಸಮಿತಿ ಅಧ್ಯಕ್ಷೆ ನಳಿನಿ ಚಂದ್ರಶೇಖರ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಗ್ರಾಮದ ಹಿರಿಯ ದೈವಪಾತ್ರಿ ಅಣ್ಣು ಪೂಜಾರಿ ದಲ್ಕಾಜೆಗುತ್ತು, ಹಿರಿಯ ಮೂರ್ತೆದಾರ ಸಾಂತಪ್ಪ ಪೂಜಾರಿ ಹಿತ್ತಿಲು, ಬಹುಮುಖ ಸಾಧನೆಯ ಕಾಂತಪ್ಪ ಬಂಗೇರ ಬಳಂತಿಮೊಗರು ರವರನ್ನು ಗೌರವಿಸಲಾಯಿತು.
ಸಂಘದ ಮುಂದಿನ ಎರಡು ವರ್ಷದ ಅವಧಿಯ ಬಿಲ್ಲವ ಸಂಘದ ಸಮಿತಿ, ಮಹಿಳಾ ಸಮಿತಿ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನಡೆಯಿತು.ರಿದ್ವಿತ ಕೆ. ಪ್ರಾರ್ಥಿಸಿದರು. ರಮೇಶ್ ಕೋಡಂದೂರು ಸ್ವಾಗತಿಸಿದರು. ಭವ್ಯಾ ಮೋಹನ್ ವಂದಿಸಿದರು. ಜಗನ್ನಾಥ ಎಸ್.ಕಾರ್ಯಕ್ರಮ ನಿರೂಪಿಸಿದರು. ದಿವ್ಯ ಬಳಂತಿಮೊಗರು ಸನ್ಮಾನಿತರ ಪಟ್ಟಿ ವಾಚಿಸಿದರು. ಬೆಳಿಗ್ಗೆ ಅರ್ಕೆಚ್ಚಾರು ಸುರೇಶ್ ಶಾಂತಿಯವರ ನೇತೃತ್ವದಲ್ಲಿ ಧಾರ್ಮಿಕ ಪೂಜಾ ಕಾರ್ಯಕ್ರಮ ನಡೆಯಿತು.