Breaking
31 Mar 2026, Tue

ದಡ್ಡಲಕಾಡು ಜಗದಂಬಿಕಾ ಕ್ಷೇತ್ರದಲ್ಲಿ ಏ.2ರಂದು ಬಿಂಬ ಪುನರ್ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವ

ಬಂಟ್ವಾಳ: ಮೂಡನಡುಗೋಡು ಗ್ರಾಮದ ದಡ್ಡಲಕಾಡು ದೇವಿನಗರ ಶ್ರೀ ಜಗದಂಬಿಕಾ ಮಹಮ್ಮಾಯಿ ಗುಳಿಗ ಅಣ್ಣಪ್ಪ ಕ್ಷೇತ್ರವು ರೂ. 30 ಲಕ್ಷ ವೆಚ್ಚದಲ್ಲಿ ಪುನರ್ ನವೀಕರಣಗೊಂಡಿದ್ದು, ಏ.2ರಂದು ತಂತ್ರಿ ವಿದ್ಯಾಶಂಕರ ಭಟ್ ಮತ್ತು ಪುರೋಹಿತ ಸತ್ಯನಾರಾಯಣ ಭಟ್ ಇಜ್ಜ ಇವರ ಮಾರ್ಗದರ್ಶನದಲ್ಲಿ ದೇವರ ಬಿಂಬ ಪುನರ್ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವ ಹಾಗೂ ಚಂಡಿಕಾಯಾಗ ನಡೆಯಲಿದೆ ಎಂದು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಾಮದಾಸ್ ಬಂಟ್ವಾಳ್ ತಿಳಿಸಿದ್ದಾರೆ.

ಮಾ. 30 ರಂದು ಬಿ.ಸಿ.ರೋಡಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಈಗಾಗಲೇ ಸೋಮವಾರ ಬಂಟ್ವಾಳದಿಂದ ಆಕರ್ಷಕ ಹೊರೆಕಾಣಿಕೆ ಮೆರವಣಿಗೆ ನಡೆದಿದ್ದು, ಮಾ.31ರಂದು ತಂತ್ರಿವರ್ಯರ ಆಗಮನ ಮತ್ತು ಮಂಟಪ ಶುದ್ಧಿ ಸಹಿತ ವಾಸ್ತುಪೂಜೆ ನಡೆಯಲಿದೆ. ಅಂದು ಸಂಜೆ 5 ಗಂಟೆಗೆ ಧಾರ್ಮಿಕ ಸಭೆ ಮತ್ತು ರಾತ್ರಿ 8 ಗಂಟೆಗೆ ಬೆದ್ರ ಕಲಾವಿದರಿಂದ ತುಳು ನಾಟಕ ಪ್ರದರ್ಶನಗೊಳ್ಳಲಿದೆ’ ಎಂದರು.

ಏ.1ರಂದು ಬೆಳಿಗ್ಗೆ ಗಂಟೆ 7ರಿಂದ ವಿವಿಧ ಧಾರ್ಮಿಕ ವಿಧಿ ವಿಧಾನ ಸಹಿತ ಸಂಜೆ 5 ಗಂಟೆಗೆ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ಏ.2ರಂದು ಬೆಳಿಗ್ಗೆ ಗಂಟೆ 9.40ಕ್ಕೆ ದೇವರ ಬಿಂಬ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವ ನಡೆಯಲಿದೆ. ಅಂದು ಮಧ್ಯಾಹ್ನ ಗಂಟೆ 12.30ಕ್ಕೆ ನಡೆಯುವ ‘ಸುಧರ್ಮ ಸಭೆ’ಗೆ ಮಹರ್ಷಿ ಆನಂದ ಗುರೂಜಿ ಸಹಿತ ಆರ್ ಎಸ್ ಮುಖಂಡ ಡಾ.ಕೆ.ಪ್ರಭಾಕರ ಭಟ್, ಬಿಜೆಪಿ ನಾಯಕಿ ಸುಲೋಚಬಾ ಜಿ.ಕೆ.ಭಟ್, ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ರಾಜೇಶ ನಾಯ್ಕ್ ಉಳಿಪಾಡಿ ಮತ್ತಿತರ ಗಣ್ಯರು ಭಾಗವಹಿಸಿದ್ದಾರೆ. ಹಾಗೂ ಸಂಜೆ ತಾಂಬೂಲ ಕಲಾವಿದರಿಂದ ತುಳು ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಅವರು ತಿಳಿಸಿದರು.

ಏ. 3ರಂದು ಬೆಳಿಗ್ಗೆ ಗಂಟೆ 7ರಿಂದ ಗಣಪತಿ ಹವನ, ದೇವರಿಗೆ ನವಕ ಕಲಶಾಭಿಷೇಕ, ಪರಿವಾರ ದೈವಗಳಿಗೆ ಕಲಶಾಭಿಷೇಕ, 9 ಗಂಟೆಗೆ ಚಂಡಿಕಾ ಯಾಗ, ದೇವಿಗೆ 108 ಸೀಯಾಳಾಭಿಷೇಕ, 12 ಗಂಟೆಗೆ ಪೂರ್ಣಾಹುತಿ, ಮಧ್ಯಾಹ್ನ 1 ಗಂಟೆಗೆ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಅಂದು ರಾತ್ರಿ ಗಂಟೆ 9.30ಕ್ಕೆ ಸಸಿಹಿತ್ಲು ಮೇಳದಿಂದ ‘ಭಗವತಿ ಮಹಾತ್ಮೆ’ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಏ.4ರಂದು ರಾತ್ರಿ ಗಂಟೆ 8ರಿಂದ ‘ಮಾರಿ ಪೂಜಾ ಉತ್ಸವ’ ನಡೆಯಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಧರ್ಣಪ್ಪ ಪೂಜಾರಿ ರಾಮನಗರ ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಸಮಿತಿ ಸಂಚಾಲಕ ದಾಮೋದರ ಜೆ.ಡಿ.ದೇವಿನಗರ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *