ಉಡುಪಿ: ನಕಲಿ ಚಿನ್ನದ ಸರ ತೋರಿಸಿ ವಂಚನೆ ಮಾಡಿದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ತುಮಕೂರು ಜಿಲ್ಲೆಯ ಬೆಳ್ಳಾವಿ ಹೋಬಳಿ ಬಲ್ಲಾಪುರ ಬುಡುಗನಹಳ್ಳಿ ನಿವಾಸಿ ಕಾವ್ಯ ಮತ್ತು ದಾವಣಗೆರೆ ಜಿಲ್ಲೆಯ ಸಂತೆಬೆನ್ನೂರು ತಾಲೂಕಿನ ವೆಂಕಟೇಶ್ ಎಂದು ಗುರುತಿಸಲಾಗಿದೆ.

ಕಾಪು ತಾಲೂಕಿನ ಪಡುಬಿದ್ರಿ ಹಳೆ ಅಂಚೆ ಕಚೇರಿ ಬಳಿ ಬಸ್ಸಮ್ಮ ಎಂಬವರು ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಅಪರಿಚಿತ ಮಹಿಳೆ ಮತ್ತು ಗಂಡಸು ಪರಿಚಯ ಮಾಡಿಕೊಂಡು, ಚಿನ್ನದಂತೆ ತೋರುವ ಸರವನ್ನು ತೋರಿಸಿ ಇದು 6 ಪವನು ಚಿನ್ನದ ಸರ, ತುರ್ತು ಹಣದ ಅವಶ್ಯಕತೆ ಇದೆ ಎಂದು ನಂಬಿಸಿದ್ದಾರೆ. ಈ ವೇಳೆ ಬಸ್ಸಮ್ಮರವರಿಂದ ಸುಮಾರು 2 ಪವನು ತೂಕದ, ಅಂದಾಜು ₹1.50 ಲಕ್ಷ ಮೌಲ್ಯದ ಬಂಗಾರದ ಒಡವೆಗಳು ಹಾಗೂ ರೂ. 6,000 ನಗದು ಕೊಟ್ಟು ಬಳಿಕ ಬಸ್ಸಮ್ಮ ಸರವನ್ನು ಪರಿಶೀಲಿಸಲು ಹತ್ತಿರದ ಚಿನ್ನದ ಅಂಗಡಿಗೆ ಹೋದಾಗ ಅದು ನಕಲಿ ಎಂಬುದು ತಿಳಿದು ಬಂದಿದೆ. ಬಳಿಕ ಹಿಂದಿರುಗಿ ನೋಡಿದಾಗ ಆರೋಪಿಗಳು ಪರಾರಿಯಾಗಿದ್ದು, ಈ ಕುರಿತು ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಗಳಿಂದ ರೂ. 75,000 ಮೌಲ್ಯದ 7.610 ಗ್ರಾಂ ಚಿನ್ನಾಭರಣ ಹಾಗೂ ₹6,000 ನಗದು ವಶಪಡಿಸಿಕೊಂಡಿದ್ದಾರೆ.






