ಪುತ್ತೂರು: ಕಾರು ಚಾಲಕರೊಬ್ಬರಿಗೆ ಪಿಸ್ತೂಲ್ ತೋರಿಸಿ ಬೆದರಿಕೆ ಹಾಕಿ ಗುಂಡು ಹಾರಿಸಲು ಯತ್ನಿಸಿದ ಘಟನೆ ಪುತ್ತೂರಿನ ರಿಲಯನ್ಸ್ ಮಾಲ್ ಬಳಿ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಪುತ್ತೂರು ನಿವಾಸಿ ಮಹಮ್ಮದ್ ಶಫೀಕ್ (19) ಎಂದು ಗುರುತಿಸಲಾಗಿದೆ.

ಮಾ. 2 ರಂದು ಹಕೀಂ ಅವರು ಪುತ್ತೂರಿನಿಂದ ಕೂರ್ನಡ್ಕಕ್ಕೆ ಕಾರಿನಲ್ಲಿ ತೆರಳುತ್ತಿದ್ದಾಗ, ಹೆಲ್ಮೆಟ್ ಧರಿಸದ ಅಪರಿಚಿತ ವ್ಯಕ್ತಿಯೊಬ್ಬ ರಿಲಯನ್ಸ್ ಮಾಲ್ ಬಳಿ ಕಾರನ್ನು ಅಡ್ಡಗಟ್ಟಿದ್ದಾನೆ. ಬಳಿಕ ಪಿಸ್ತೂಲ್ ತೋರಿಸಿ ಗುಂಡು ಹಾರಿಸಲು ಯತ್ನಿಸಿ ಬೆದರಿಕೆ ಹಾಕಿದ್ದಾನೆ.

ಈ ವೇಳೆ ಹಕೀಂ ಹಾಗೂ ಅಲ್ಲಿದ್ದ ಸಾರ್ವಜನಿಕರು ಆತನನ್ನು ಹಿಡಿಯಲು ಪ್ರಯತ್ನಿಸಿದಾಗ, ಆರೋಪಿಯು ತನ್ನ ಮೋಟಾರ್ ಸೈಕಲ್‌ನಲ್ಲಿ ಸ್ಥಳದಿಂದ ಪರಾರಿಯಾಗಿದ್ದನು.

ಈ ಕುರಿತು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.






