Breaking
25 Sep 2026, Fri

ಮಲ್ಪೆ ಪಡುಕೆರೆಯ ರೆಸಾರ್ಟ್ ನಲ್ಲಿ ಮಹಿಳೆ ಸಾವು; ಹೃದಯಾಘಾತ ಶಂಕೆ

ಉಡುಪಿ : ಪ್ರವಾಸಕ್ಕಾಗಿ ಬಂದಿದ್ದ ಮಹಿಳೆಯೊಬ್ಬರು ರೆಸಾರ್ಟ್ ನಲ್ಲಿ ಮೃತಪಟ್ಟ ಘಟನೆ ಉಡುಪಿ ಜಿಲ್ಲೆಯ ಮಲ್ಪೆ ಸಮೀಪದ ಪಡುಕೆರೆಯಲ್ಲಿ ನಡೆದಿದೆ.

ಮೃತರನ್ನು ಲೆನ್ಸಿ ಮೇರಿ ಯಾನೆ ಸೂರ್ಯ (36) ಎಂದು ಗುರುತಿಸಲಾಗಿದ್ದು, ಅವರು ಬೆಂಗಳೂರಿನ ಎಲ್. ಜಾಕ್ಸನ್ ಅವರ ಪತ್ನಿಯಾಗಿದ್ದಾರೆ.

ಮಾಹಿತಿಯ ಪ್ರಕಾರ, ಲೆನ್ಸಿ ಮೇರಿ ಅವರು ಫೆಬ್ರವರಿ 26ರಂದು ಇನ್ನೂ 9 ಮಂದಿ ಸ್ನೇಹಿತರೊಂದಿಗೆ ಬೆಂಗಳೂರಿನಿಂದ ಹೊರಟು ಪಡುಕೆರೆಯ ರೆಸಾರ್ಟ್ ನಲ್ಲಿ ತಂಗಿದ್ದರು. ಫೆಬ್ರವರಿ 27ರಂದು ಮಲ್ಪೆ ಬೀಚ್ ನಲ್ಲಿ ಸುತ್ತಾಡಿ ಬಂದು ರಾತ್ರಿ ಮಲಗಿದ್ದರು ಎಂದು ತಿಳಿದುಬಂದಿದೆ. ಫೆಬ್ರವರಿ 28ರಂದು ಬೆಳಗ್ಗೆ ಅವರನ್ನು ಎಬ್ಬಿಸಿದಾಗ ಸ್ಪಂದಿಸದ ಹಿನ್ನೆಲೆಯಲ್ಲಿ ತಕ್ಷಣವೇ ಮಣಿಪಾಲದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ವೈದ್ಯರು ಪರೀಕ್ಷಿಸಿದ ಬಳಿಕ ಅವರು ಮೃತಪಟ್ಟಿರುವುದಾಗಿ ಘೋಷಿಸಿದರು.

ಪ್ರಾಥಮಿಕವಾಗಿ ಹೃದಯಾಘಾತದಿಂದ ಸಾವು ಸಂಭವಿಸಿರುವ ಶಂಕೆ ವ್ಯಕ್ತವಾಗಿದ್ದು, ನಿಖರ ಕಾರಣ ಮರಣೋತ್ತರ ಪರೀಕ್ಷೆಯ ವರದಿಯಿಂದ ತಿಳಿದುಬರುವ ಸಾಧ್ಯತೆ ಇದೆ.

ಈ ಕುರಿತು ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

Leave a Reply

Your email address will not be published. Required fields are marked *