ಬೆಳ್ತಂಗಡಿ : ಚಿನ್ನದ ಒಡವೆಗಳನ್ನು ತೊಳೆದು ಪಾಲಿಶ್ ಮಾಡಿಕೊಡುವುದಾಗಿ ನಂಬಿಸಿ, ರಾಸಾಯನಿಕ ದ್ರಾವಣ ಬಳಸಿ ಕರಗಿಸಿ ವಂಚನೆ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಬಿಹಾರದ ಸುಪೋಲ್ ಜಿಲ್ಲೆಯ ನಿವಾಸಿ ಚಂದನ್ ಕುಮಾರ್ (30) ಎಂದು ಗುರುತಿಸಲಾಗಿದೆ.

ಫೆಬ್ರವರಿ 10ರಂದು ಬೆಳ್ತಂಗಡಿ ತಾಲೂಕಿನ ಕಾಶಿಪಟ್ಟ ಗ್ರಾಮದ ಪಣಿಲಾಜೆ ಪ್ರದೇಶದಲ್ಲಿ ಮನೆಮನೆಗೆ ತೆರಳಿದ್ದ ಆರೋಪಿ, ಚಿನ್ನದ ಒಡವೆಗಳನ್ನು ತೊಳೆದು ಹೊಳಪು ಮಾಡಿಕೊಡುವುದಾಗಿ ಹೇಳಿ ವಿಶ್ವಾಸ ಗಳಿಸಿದ್ದಾನೆ. ಬಳಿಕ ಯಾವುದೋ ರಾಸಾಯನಿಕ ದ್ರಾವಣ ಬಳಸಿ ಚಿನ್ನವನ್ನು ಕರಗಿಸಿ ವಂಚಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಈ ಕುರಿತು ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸುಳಿವು ಸಿಕ್ಕ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಸದ್ಯ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ. ಪ್ರಕರಣದ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.







