ಹಾವೇರಿ: ನಗರದ ಹೊರವಲಯದ ಅಜ್ಜಯ್ಯ ದೇವಸ್ಥಾನದ ಬಳಿ ನಡೆಯುತ್ತಿರುವ ರಾಜ್ಯ ಕಾಂಗ್ರೆಸ್ ನ ಸಮಾವೇಶದಲ್ಲಿ ಗೊಟಗೋಡಿ ರಾಕ್ ಗಾರ್ಡನ್ ಮುಖ್ಯಸ್ಥ ದಾಸನೂರ್ ಅವರು ಕೊಡುಗೆಯಾಗಿ ನೀಡಿರುವ ವಿಧಾನಸೌಧದ ಮುಂಭಾಗದಲ್ಲಿ ಸಿಎಂ ಸಿದ್ದರಾಮಯ್ಯ ನಿಂತಂತೆ ರಚನೆಯಾಗಿರುವ ಪುತ್ಥಳಿಯನ್ನು ಅನಾವರಣಗೊಳಿಸಲಾಗಿದೆ.

ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ 1000 ದಿನಗಳು ತುಂಬಿದ ಸಂಭ್ರಮದ ಹಿನ್ನೆಲೆಯಲ್ಲಿ ಭೂ ಗ್ಯಾರಂಟಿ ಸಮರ್ಪಣಾ ಎಂಬ ಬೃಹತ್ ಸಮಾವೇಶವನ್ನು ಸರಕಾರದ ವತಿಯಿಂದ ಆಯೋಜನೆ ಮಾಡಲಾಗಿದ್ದು ಸುಮಾರು ಒಂದು ಲಕ್ಷ ಕುಟುಂಬಗಳಿಗೆ ಹಕ್ಕು ಪತ್ರ ವಿತರಣೆ ಹಾಗೂ ರಾಜ್ಯದ 9 ಜಿಲ್ಲೆಯ ಒಂದು ಲಕ್ಷ ಕುಟುಂಬಗಳಿಗೆ ಹಕ್ಕು ಪತ್ರ ವಿತರಣಾ ಮಾಡಲಾಗುತ್ತಿದೆ.

ಕಾರ್ಯಕ್ರಮವನ್ನು ಸಿರಿ ಧಾನ್ಯಗಳ ನಾಮಫಲಕದ ಮೂಲಕ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಉದ್ಘಾಟನೆ ಮಾಡಿದ್ದಾರೆ. ಈ ವೇಳೆ ಭೂ ಗ್ಯಾರಂಟಿ ಪುಸ್ತಕ ಬಿಡುಗಡೆ ಮಾಡಲಾಯಿತು. ಬಳಿಕ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗಿದೆ. ಉತ್ತಮ ಕೆಲಸ ಮಾಡಿದ ತಹಶೀಲ್ದಾರ್ ಗಳಿಗೆ ಸನ್ಮಾನ ಮಾಡಲಾಗಿದೆ. ಸಿಎಂ ಪುತ್ಥಳಿ ನೋಡಿ ಡಿಸಿಎಂ ಮಂದಹಾಸ ಬೀರಿದ್ದಾರೆ. ಇದೇ ವೇಳೆ ಧಾನಿ ದಾಸನೂರ್ಗೆ ಸಿಎಂ ಹಾಗೂ ಡಿಸಿಎಂ ಅಭಿನಂದಿಸಿದ್ದಾರೆ.

ಸಾಧನ ಸಮಾವೇಶದಲ್ಲಿ ಸಚಿವರಾದ ಸತೀಶ್ ಜಾರಕಿಹೋಳಿ, ಹೆಚ್.ಕೆ.ಪಾಟೀಲ್ ಹಾಗೂ ಶಿವಾನಂದ ಪಾಟೀಲ್ ಸೇರಿದಂತೆ ಹಲವು ಸಚಿವರು ಭಾಗಿಯಾಗಿದ್ದಾರೆ.

ಸಮಾವೇಶದ ಭದ್ರತೆಗಾಗಿ ಸ್ಥಳದಲ್ಲಿ ಮೂರು ಸಾವಿರಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.






