ಬಂಟ್ವಾಳ: ಪುರಸಭಾ ವ್ಯಾಪ್ತಿಯ ವಿವಿಧೆಡೆ ಸ್ವಚ್ಛತಾ ಕಾರ್ಯ ನಡೆಸಬೇಕಾದ ಪೌರ ಕಾರ್ಮಿಕರು ವಿವಿದೆಡೆ ತೆರಳಿ ಕುಡಿಯುವ ನೀರಿನ ಪೈಪ್ ದುರಸ್ತಿಗೊಳಿಸುತ್ತಿರುವ ಬಗ್ಗೆ ವ್ಯಾಪಕ ಟೀಕೆ ಕೇಳಿ ಬಂದಿದೆ.

ಇತ್ತೀಚಿಗಷ್ಟೇ ಮುಖ್ಯಾಧಿಕಾರಿಯಾಗಿ ಇಲ್ಲಿಗೆ ಬಂದಿರುವ ತೀರ್ಥಪ್ರಸಾದ್ ಅವರು ಕಳೆದ 1997ರಿಂದ ಹೊರಗುತ್ತಿಗೆ ಆಧಾರದಲ್ಲಿ ನೇಮಕಗೊಂಡು ಕರ್ತವ್ಯ ನಿರ್ವಹಿಸುತ್ತಿದ್ದ 9 ಮಂದಿ ನೌಕರರನ್ನು ಕಳೆದ ನಾಲ್ಕು ದಿನಗಳ ಹಿಂದೆಯಷ್ಟೇ ಸೇವೆಯಿಂದ ತೆರವುಗೊಳಿಸಿದ್ದರು. ಈ ಬಗ್ಗೆ ಪುರಸಭೆ ಎದುರು ನೌಕರರು ಎರಡೆರಡು ಬಾರಿ ಪ್ರತಿಭಟನೆ ನಡೆಸಿದಲ್ಲದೇ ಪುರಸಭೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವುದರ ಜೊತೆಗೆ ‘ಯಾವುದೇ ಟೆಂಡರ್ ಕರೆಯದೆ ಹೊರಗುತ್ತಿಗೆ ಆಧಾರದಲ್ಲಿ ನೌಕರರನ್ನು ನೇಮಕಗೊಳಿಸಿರುವುದನ್ನು ಕಾನೂನು ರೀತಿಯಲ್ಲಿ ತೆರವುಗೊಳಿಸಲಾಗಿದೆ’ ಎಂದು ಅವರು ತಿಳಿಸಿದ್ದರು.

ಇದೀಗ ಪುರಸಭಾ ವ್ಯಾಪ್ತಿಯಲ್ಲಿ ಸ್ವಚ್ಛತೆಗಾಗಿ ಸರ್ಕಾರ ನೇಮಿಸಿದ 36 ಮಂದಿ ಖಾಯಂ ಪೌರ ಕಾರ್ಮಿಕರಿಗೆ ವಿವಿಧೆಡೆ ತೆರಳಿ ಹಾನಿಗೀಡಾದ ಕುಡಿಯುವ ನೀರಿನ ಪೈಪ್ ಲೈನ್ ದುರಸ್ತಿಗೊಳಿಸುವ ಹೆಚ್ಚುವರಿ ಹೊರೆ ಬಿದ್ದಿದೆ. ರಾಜ್ಯದಲ್ಲಿ ಪೌರ ಕಾರ್ಮಿಕರನ್ನು ಸರ್ಕಾರ ನಿಗದಿಪಡಿಸಿದ ಕರ್ತವ್ಯ ಹೊರತುಪಡಿಸಿ ಇತರೆ ಕೆಲಸಗಳಿಗೆ ನಿಯೋಜಿಸದಂತೆ ಕಳೆದ ಎರಡು ವರ್ಷಗಳ ಹಿಂದೆಯೇ ಪೌರಾಡಳಿತ ನಿರ್ದೇಶನಾಲಯ ಸುತ್ತೋಲೆ ಕಳುಹಿಸಿದೆ. ನಮಗೆ ಸ್ವಚ್ಛತೆ ಕೆಲಸ ಮಾತ್ರ ತಿಳಿದಿದ್ದು, ಈಚೆಗಷ್ಟೇ ಮೊಡಂಕಾಪು ಪರಿಸರದಲ್ಲಿ ಪೈಪ್ ಲೈನ್ ದುರಸ್ತಿ ವೇಳೆ ಕೇಬಲ್ ಹಾನಿಗೀಡಾದ ಪ್ರಸಂಗವೂ ನಡೆದಿದೆ ಎಂದು ಪೌರ ಕಾರ್ಮಿಕರು ಅಳಲು ತೋಡಿಕೊಂಡಿದ್ದಾರೆ.

ಹೊರಗುತ್ತಿಗೆ ಆಧಾರದಲ್ಲಿ ನೇಮಕಗೊಂಡಿದ್ದ ಸಿಬ್ಬಂದಿಗಳು ಕುಡಿಯುವ ನೀರಿನ ಬಿಲ್ಲು ಸೇರಿದಂತೆ ಮನೆ ತೆರಿಗೆ ಸಂಗ್ರಹಿಸಿ ಪುರಸಭೆಗೆ ಆಧಾರವಾಗಿದ್ದರು. ಕಳೆದ ಮೂರು ತಿಂಗಳಿನಿಂದ ಇವರಿಗೆ ವೇತನವನ್ನೂ ಪಾವತಿಸದಿರುವ ಮುಖ್ಯಾಧಿಕಾರಿ ಕ್ರಮದ ವಿರುದ್ಧ ಪುರಸಭೆಯಲ್ಲಿ ಈಚೆಗೆ ಸಿಬ್ಬಂದಿಗಳು ನಡೆಸಿದ್ದ ಪ್ರತಿಭಟನೆಯಲ್ಲಿ ಕೆಲವೊಂದು ಪುರಸಭೆ ಮಾಜಿ ಅಧ್ಯಕ್ಷರು ಮತ್ತು ಸದಸ್ಯರು ಕೂಡಾ ಬೆಂಬಲ ವ್ಯಕ್ತಪಡಿಸಿದ್ದಾರೆ.







