ಕುಂದಾಪುರ: ಕಣ್ಣುಕೆರೆಯ ನವಶಕ್ತಿ ಕಲ್ಯಾಣ ಮಂಟಪದ ಮುಂಭಾಗದಲ್ಲಿ ಫಾರ್ಚುನರ್ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿ ಹೊಡೆದು ಆರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

ಜ.31 ರಂದು ಎರಡು ಕಾರುಗಳಲ್ಲಿ ಒಟ್ಟು 12 ಮಂದಿಯ ತಂಡ ದೇಶಾದ್ಯಂತ ಪ್ರವಾಸ ಹೊರಟಿತ್ತು. ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿ ಪುಣೆಗೆ ಹಿಂತಿರುಗುತ್ತಿದ್ದಾಗ ತೆಕ್ಕಟ್ಟೆ ಸಮೀಪ ಫಾರ್ಚುನರ್ ಕಾರು ಮೊದಲು ಡಿವೈಡರ್ ಮೇಲೆ ಹತ್ತಿ, ನಂತರ ವಿರುದ್ಧ ದಿಕ್ಕಿನ ರಸ್ತೆಯ ಪಕ್ಕದಲ್ಲಿದ್ದ ಚರಂಡಿಗೆ ಉರುಳಿ ಬಿದದ್ದು ಈ ಅಪಘಾತ ಸಂಭವಿಸಿದೆ.

ಅಪಘಾತದಲ್ಲಿ ಕಾರಿನಲ್ಲಿದ್ದ ಚಾಲಕ ಸೇರಿದಂತೆ ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಸ್ಥಳೀಯ ನಿವಾಸಿಗಳು ಪಲ್ಟಿಯಾಗಿದ್ದ ಕಾರಿನೊಳಗೆ ಸಿಲುಕಿದ್ದ ವಿದ್ಯಾರ್ಥಿಗಳನ್ನು ಹೊರತೆಗೆದು ತಕ್ಷಣ ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಗಾಯಗೊಂಡವ ವಿದ್ಯಾರ್ಥಿಗಳು ಮಹಾರಾಷ್ಟ್ರದ ಪುಣೆಯ ವಿವಿಧ ಕಾಲೇಜುಗಳಲ್ಲಿ ಕಾನೂನು ಮತ್ತು ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಎಂದು ಗುರುತಿಸಲಾಗಿದೆ.

ಅತಿಯಾದ ವೇಗ ಮತ್ತು ಅಜಾಗರೂಕ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ತನಿಖೆಯಿಂದ ತಿಳಿದುಬಂದಿದೆ.







