ಕಾರ್ಕಳ: ಪರವಾನಿಗೆ ಇಲ್ಲದೇ ಅಕ್ರಮವಾಗಿ ಸ್ಪೋಟಕಗಳ ಬಳಸಿ ಕಲ್ಲು ಬಂಡೆಗಳನ್ನು ಸ್ಫೋಟಿಸಿದ ಇಬ್ಬರು ಆರೋಪಿಗಳನ್ನು ಕಾರ್ಕಳ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಕುಕ್ಕುಂದೂರು ಗ್ರಾಮ ಅಯ್ಯಪ್ಪ ನಗರ ನಿವಾಸಿ ಟಿ. ರವಿಚಂದ್ರ (55) ಹಾಗೂ ಆತನ ಮಗ ಪವನ್ ಕುಮಾರ್ (31) ಎಂದು ಗುರುತಿಸಲಾಗಿದೆ.

ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದ ನಕ್ರೆ ಹಾಂಕ್ರಾಡಿ ಎಂಬಲ್ಲಿ ಯಾವುದೇ ಪರವಾನಿಗೆ ಹೊಂದದೇ ಸ್ಪೋಟಕ ಬಳಸಿ ಕಲ್ಲುಗಳನ್ನು ಸ್ಫೋಟಿಸಿದ್ದರು. ಈ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಜ. 21 ರಂದು ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯವು ಆರೋಪಿಗಳಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.







