ಕುಂದಾಪುರ: ಸರ್ಕಲ್ ಬಳಿ ಇರುವ ಎಸ್‌ಪಿಜಿ ಗೋಲ್ಡ್ ಆ್ಯಂಡ್ ಡೈಮಂಡ್ ಅಂಗಡಿಗೆ ಗ್ರಾಹಕರ ಸೋಗಿನಲ್ಲಿ ಬಂದು ಚಿನ್ನದ ಸರ ಕಳವು ಮಾಡಿದ ಆರೋಪಿಯನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಬಂಟ್ವಾಳ ತಾಲೂಕಿನ ಕಜೆಕಾರ್ ಗ್ರಾಮದ ಬಡಗ ನಿವಾಸಿ ರಮೇಶ(42) ಎಂದು ಗುರುತಿಸಲಾಗಿದೆ.

ಜ.27ರಂದು ಅಪರಿಚಿತ ವ್ಯಕ್ತಿಯೊಬ್ಬ ಗ್ರಾಹಕರ ಸೋಗಿನಲ್ಲಿ ಬಂದು ಚಿನ್ನವನ್ನು ತೆಗೆದುಕೊಳ್ಳುವ ನೆಪದಲ್ಲಿ ಅಂಗಡಿಯ ಸಿಬ್ಬಂದಿಯ ಕಣ್ಣು ತಪ್ಪಿಸಿ ಸುಮಾರು 9 ಗ್ರಾಮ್ ತೂಕದ 125000 ರೂ. ಮೌಲ್ಯದ ಚಿನ್ನದ ಸರವನ್ನು ಕಳವು ಮಾಡಿದ್ದಾನೆ ಎಂದು ತಿಳಿದುಬಂದಿದೆ.

ಈ ಕುರಿತು ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಬಂಧಿತ ಆರೋಪಿಯಿಂದ ಚಿನ್ನದ ಚೈನ್ ಮತ್ತು ಆತನ ವಶದಲ್ಲಿದ್ದ 33000ರೂ. ಹಣವನ್ನು ವಶಪಡಿಸಿಕೊಂಡಿದ್ದಾರೆ.




