ಮಂಗಳೂರು: ಕೊಣಾಜೆಯ ಪಜೀರು ಚರ್ಚ್ ಹಾಲ್ ನಲ್ಲಿ ಕಾಂಗ್ರೆಸ್ ಕಾರ್ಯಕರ್ತೆಯೊಬ್ಬರ ಮೇಲೆ ವ್ಯಕ್ತಿಯೋರ್ವ ಬಿಯರ್ ಬಾಟಲಿಯಿಂದ ಹಲ್ಲೆ ನಡೆಸಿದ ಘಟನೆ ನಡೆದಿದೆ.
ಹಲ್ಲೆ ನಡೆಸಿದ ವ್ಯಕ್ತಿಯನ್ನು ವಲೇರಿಯನ್ ಡಿಸೋಜ ಎಂದು ಗುರುತಿಸಲಾಗಿದ್ದು , ಹಲ್ಲೆಗೊಳಗಾದ ಮಹಿಳೆಯನ್ನು ಪಜೀರು ಗ್ರಾಪಂ ಮಾಜಿ ಸದಸ್ಯೆ ಸುನಿತಾ ಲೋಬೊ ಎಂದು ತಿಳಿದುಬಂದಿದೆ.

ಜ. 6 ರಂದು ಸುನಿತಾ ಲೋಬೊ ಅವರು ಕುಟುಂಬ ಸಮೇತರಾಗಿ ರೋಸ್ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ವಲೇರಿಯನ್ ಡಿಸೋಜ ಅವರಿಗೆ ತಪ್ಪಿ ಮೈಗೆ ತಾಗಿದ ಹಿನ್ನಲೆಯಲ್ಲಿ ಮಾತಿಗೆ ಮಾತು ಬೆಳೆದು ವಲೇರಿಯನ್ ಡಿಸೋಜ ಬಿಯರ್ ಬಾಟಲಿಯಿಂದ ಮಹಿಳೆಯ ಮೇಲೆ ಹಲ್ಲೆ ನಡೆಸಿದ್ದಾರೆ. ಇದನ್ನು ಕಂಡು ಮಹಿಳೆಯ ಜೊತೆಗಿದ್ದ ಪತಿ ಮತ್ತು ಮಗ ವಲೇರಿಯನ್ ಡಿಸೋಜ ರವರ ಮೇಲೂ ಹಲ್ಲೆ ನಡೆಸಿದ್ದಾರೆ.

ಘಟನೆಯಲ್ಲಿ ಮಹಿಳೆಯ ಹಣೆಗೆ ಗಂಭೀರ ಗಾಯಗಳಾಗಿದ್ದು ಸ್ಥಳದಲ್ಲೇ ಪ್ರಜ್ಞೆ ತಪ್ಪಿ ಬಿದ್ದಿದ್ದು, ಬಳಿಕ ಸುಮಾರು ಒಂದು ವಾರ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಇನ್ನೊಂದೆಡೆ ಆರೋಪಿಯಾಗಿರುವ ವಲೇರಿಯನ್ ಡಿಸೋಜ ಕೂಡ ಆಸ್ಪತ್ರೆಗೆ ದಾಖಲಾಗಿದ್ದು ಕಳೆದ ಹತ್ತು ದಿನಗಳಿಂದಲೂ ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗುತ್ತ ಪೊಲೀಸರ ಬಂಧನದಿಂದ ತಪ್ಪಿಸಿಕೊಳ್ಳುತ್ತಿದ್ದಾನೆ ಎನ್ನಲಾಗಿದೆ.

ಮಾಹಿತಿಯ ಪ್ರಕಾರ ವಲೇರಿಯನ್ ಡಿಸೋಜ ಅವರ ಪತ್ನಿಗೆ ಕಾಂಗ್ರೆಸಿನಿಂದ ಟಿಕೆಟ್ ಪಡೆಯಲು ಪ್ರಯತ್ನ ಪಡುತ್ತಿದ್ದರು. ಇದೇ ಸಮಯದಲ್ಲಿ ಸುನೀತಾ ಲೋಬೋ 2015ರಲ್ಲಿ ಪಜೀರು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿ ಜಯಗಳಿಸಿದ್ದರು. ಈ ವಿಷಯದಿಂದ ಸಿಟ್ಟಾಗಿದ್ದ ವಲೇರಿಯನ್ ಡಿಸೋಜ ಅವರು ಪ್ರತಿ ಬಾರಿ ಸಣ್ಣ ಸಣ್ಣ ವಿಷಯಕ್ಕೂ ನಮ್ಮ ಮನೆಯವರೊಂದಿಗೆ ಜಗಳಕ್ಕೆ ಬಂದು ಹಗೆ ತೀರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ ಎಂದು ಸುನಿತಾ ಆರೋಪಿಸಿದ್ದಾರೆ.
ಈ ಬಗ್ಗೆ ಕೋಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



